ಮಂಗಳೂರು, ಮಾ 01 (DaijiworldNews/DB): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಇಂದಿನಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು ಬುಧವಾರ ಸ್ತಭ್ದಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಮುಷ್ಕರದ ಮೊದಲ ದಿನದಂದೇ ಜನಸಾಮಾನ್ಯರಿಗೆ ಸರ್ಕಾರಿ ಸೇವೆ ಬಹುತೇಕ ಅಲಭ್ಯವಾಗಿತ್ತು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಾರ್ವಜನಿಕ ಸೇವಾ ಕಚೇರಿಗಳು, ಮೆಸ್ಕಾಂ ಸಂಪೂರ್ಣ ಬಂದ್ ಆಗಿದ್ದು, ಯಾವುದೇ ಸೇವೆಗಳು ಲಭ್ಯವಿರಲಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳು, ಉಡುಪಿ ನಗರಸಭೆ, ವಿವಿಧ ಪುರಸಭೆ, ಪಟ್ಟಣ ಪಂಚಾಯತ್, ಸ್ಥಳೀಯ ಸಂಸ್ಥೆಗಳು, ಕಂದಾಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಬಹುತೇಕ ವ್ಯತ್ಯಯ ಉಂಟಾಗಿದೆ. ಮಂಗಳೂರಿನ ಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಹೊರ ರೋಗಿ ಸೇವೆ ಅಲಭ್ಯವಾಗಿತ್ತು. ತುರ್ತು ಸೇವೆ ಮತ್ತು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೈಕೆಯಲ್ಲಿರುವ ವೈದ್ಯರು ಮತ್ತು ಆರೋಗ್ಯ ಸಿಬಂದಿ ಕಪ್ಪು ಪಟ್ಟಿ ಧರಿಸಿ ಸೇವೆ ನೀಡಿದರು.
ಸರ್ಕಾರಿ ಸೇವೆಗಳ ಅಲಭ್ಯತೆ ಬಗ್ಗೆ ಮಾಹಿತಿ ಇರದ ಜನಸಾಮಾನ್ಯರು ತಮ್ಮ ವಿವಿಧ ಕೆಲಸಗಳಿಗಾಗಿ ಮಹಾನಗರ ಪಾಲಿಕೆ ಸಹಿತ ವಿವಿಧ ಸರ್ಕಾರಿ ಕಚೇರಿಗಳಿಗೆ ಬಂದು ಸೇವೆ ಇಲ್ಲದಿರುವುದನ್ನು ಗಮನಿಸಿ ವಾಪಸ್ಸಾದ ಪ್ರಸಂಗವೂ ನಡೆಯಿತು.
ಬಸ್ ಸೇವೆ ಅಬಾಧಿತ
ಸರ್ಕಾರಿ ಯಂತ್ರ ಬಹುತೇಕ ಸ್ತಬ್ದವಾಗಿದ್ದರೂ, ಸರ್ಕಾರಿ ಬಸ್ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿಲ್ಲ. ಕೆಎಸ್ಸಾರ್ಟಿಸಿ ಬಸ್ಗಳು ಎಂದಿನಂತೆ ಸೇವೆಯಲ್ಲಿ ನಿರತವಾಗಿರುವುದರಿಂದ ವಿವಿಧೆಡೆಗಳಿಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ತಮ್ಮದು ನಿಗಮವಾದ್ದರಿಂದ ಮುಷ್ಕರಕ್ಕೆ ಬೆಂಬಲ ಸೂಚಿಸಿಲ್ಲ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆ ಮುಂದೂಡಿಕೆ
ಸರ್ಕಾರಿ ಸೇವೆಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜು ಶಿಕ್ಷಕರು ಕೂಡಾ ಬಂದ್ಗೆ ಕೈ ಜೋಡಿಸಿದ್ದು, ಇಂದು ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳು ಬಂದ್ ಆಗಿದ್ದವು. ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮಂಗಳೂರು ವಿವಿ ಕುಲಸಚಿವ (ಆಡಳಿತ) ಪ್ರೊ. ಕಿಶೋರ್ಕುಮಾರ್ ಸಿ.ಕೆ. ತಿಳಿಸಿದ್ದಾರೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡದಿರುವುದು, ಹೊಸ ಪಿಂಚಣಿ ವ್ಯವಸ್ಥೆ ರದ್ದತಿಗೆ ಆಗ್ರಹಿಸಿ ಮುಷ್ಕರ ನಡೆಯುತ್ತಿದೆ. ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಎಲ್ಲಾ ಸರ್ಕಾರಿ ನೌಕರರು ಕಚೇರಿಗೆ ಆಗಮಿಸದೆ, ಮನೆಯಲ್ಲೇ ಕುಳಿತು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.