ಮಂಗಳೂರು,ಮಾ17(AZM):ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಿದರೆ ಪಕ್ಷದ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ನೀಡಿದ್ದಾರೆ. ಈ ಹಿನ್ನಲೆ ನಳಿನ್ ಕುಮಾರ್ ಕಟೀಲ್ ಅವರಿಗೆ ಸಂಕಷ್ಟ ಎದುರಾಗಿದೆ.
ದ.ಕ. ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಬಿಜೆಪಿಯು ಅಂತಿಮಗೊಳಿಸಿತ್ತು. ಆದರೆ ಇದೀಗ ಪಕ್ಷದಲ್ಲೇ ಭಿನ್ನಮತ ಭುಗಿಲೆದ್ದು, ಬಿಜೆಪಿ ಪಾಳಯದಲ್ಲಿ ಗೊಂದಲ ಸೃಷ್ಠಿಯಾಗಿದೆ.
ಬಿಜೆಪಿ ಕಾರ್ಯಕರ್ತರೊಬ್ಬರಿಗೆ ದಕ್ಷಿಣ ಕನ್ನಡ ಬಿಜೆಪಿ ಶಕ್ತಿಕೇಂದ್ರ ಕಾರ್ಯಕರ್ತರ ಸಮಾವೇಶಕ್ಕೆ ಬರುವಂತೆ ದೂರವಾಣಿ ಕರೆ ಮಾಡಿದ ವೇಳೆ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತುಳುವಿನಲ್ಲಿ ಮಾತನಾಡಿದ್ದು, ಈ ಆಡಿಯೋ ಈಗ ವೈರಲ್ ಆಗಿದೆ.
"ಈ ಬಾರಿ ಯಾವುದೇ ಕಾರಣಕ್ಕೂ ನಳಿನ್ ಕುಮಾರ್ ಕಟೀಲ್ ಪರವಾಗಿ ಮತ ಯಾಚನೆಗೆ ಬರುವುದಿಲ್ಲ. ಗಲಾಟೆ, ಕೇಸ್ ಗಳಾದಾಗ ಹತ್ತಿರ ಸುಳಿಯದ ನಳಿನ್ ಸ್ಟೇಶನ್ ಗೂ ಕೂಡಾ ಬಂದಿಲ್ಲ. ಅಂತಹ ವ್ಯಕ್ತಿ ಮತ್ತೆ ಆಯ್ಕೆಯಾಗಬಾರದು" ಎಂದು ಆಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಫೋನ್ ನಲ್ಲಿ ಸಂಭಾಷಣೆ ನಡೆಸಿರುವ ಇಬ್ಬರೂ, ಪುತ್ತೂರಿನ ಬಿಜೆಪಿ ಕಾರ್ಯಕರ್ತರಾಗಿದ್ದು, ಈ ಬಾರಿ ನಳಿನ್ ಪರ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ಜೊತೆಗಿರುವ ಹುಡುಗರನ್ನೂ ಕಳಿಸಿಕೊಡುವುದಿಲ್ಲ ಎಂದು ಹೇಳಿದ್ದಾರೆ.
ಈ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದು, ನಳಿನ್ ಕುಮಾರ್ ಕಟೀಲ್ ಅವರಿಗೆ ಸಂಕಷ್ಟ ಎದುರಾಗಿದೆ. ಹಾಗಾಗಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ರವರೇ ಬರಲಿದ್ದಾರಾ? ಅಲ್ಲ ಅಭ್ಯರ್ಥಿ ಬದಲಾಗಲಿದ್ದಾರಾ? ಅನ್ನೋದನ್ನು ಕಾದು ನೋಡಬೇಕಾಗಿದೆ.