ಮಣಿಪಾಲ, ಫೆ. 27 (DaijiworldNews/SM), ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಹಿಳೆಯೋರ್ವರು ಆರು ಮಂದಿಗೆ ಜೀವದಾನ ನೀಡಿದ ಘಟನೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆದಿದೆ.
44 ವರ್ಷದ ಕೊಡೇರಿ ಶಿಲ್ಪಾ ಮಾಧವರವರಿಗೆ ಬೈಂದೂರು ತಾಲೂಕಿನ ಮರವಂತೆ ಬಳಿ ಫೆಬ್ರವರಿ ರಂದು ಮದ್ಯಾಹ್ನ 1.30 ಗಂಟೆಗೆ ರಸ್ತೆ ಅಪಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ ಸಂಜೆ 4.58 ಕ್ಕೆ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು . ಪ್ರಸನ್ನ ಕುಮಾರ್ ಇವರ ಪತ್ನಿಯಾದ ಕೊಡೇರಿ ಶಿಲ್ಪಾ ಮಾಧವ ಅವರು ಅಪಘಾತದ ಪರಿಣಾಮದಿಂದ ತೀವ್ರತರವಾದ ಗಾಯವನ್ನು ಹೊಂದಿದ್ದರು.
ವೈದ್ಯರು ಗಾಯಾಳುವನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ . ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಕೊಡೇರಿ ಶಿಲ್ಪಾ ಮಾಧವ ಅವರನ್ನು ಫೆಬ್ರವರಿ 26ರಂದು ಸಂಜೆ 6.29ಕ್ಕೆ ಮೊದಲ ಬಾರಿಗೆ ಮತ್ತು ಫೆಬ್ರವರಿ 27 ರಂದು ಬೆಳಿಗ್ಗೆ 1.35 ಕ್ಕೆ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು.
ನಂತರ, ಕೊಡೇರಿ ಶಿಲ್ಪಾ ಮಾಧವ ಅವರ ಪತಿ ಪ್ರಸನ್ನ ಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ದಾನ ಮಾಡಿದ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು 6 ಜನರ ಜೀವ ಉಳಿಸಲು ಸಹಾಯವಾಗಿದೆ.
ಜೀವನಸಾರ್ಥಕತೆ ಪ್ರೋಟೋಕಾಲ್ ಗಳು ಮತ್ತು ನಿರ್ಧಾರಗಳ ಪ್ರಕಾರ, ಯಕೃತ್ ಅನ್ನು ಅಸ್ಟರ್ ಸಿ ಎಂ ಐ ಆಸ್ಪತ್ರೆ ,ಬೆಂಗಳೂರು, ಒಂದು ಮೂತ್ರಪಿಂಡವನ್ನು ಎ ಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು, ಒಂದು ಮೂತ್ರಪಿಂಡ ಹಾಗೂ ಚರ್ಮ ವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.
ಪ್ರಸನ್ನ ಕುಮಾರ್ ಮತ್ತು ಕುಟುಂಬ ಸದಸ್ಯರು "ಅಂಗದಾನ ಒಂದು ಪುಣ್ಯದ ಕೆಲಸ. ಶಿಲ್ಪಾ ಅವರು ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ " ಎಂದು ತಿಳಿಸಿದ್ದಾರೆ.
ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು “ಕೊಡೇರಿ ಶಿಲ್ಪಾ ಮಾಧವ ಕುಟುಂಬದ ಈ ಅಂಗಾಂಗ ದಾನದ ಈ ಉದಾತ್ತನಿರ್ಧಾರವು ಜನರ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದೆ ಮತ್ತು ಇತರರು ಇದನ್ನು ಅನುಕರಿಸುವ ಅಗತ್ಯವಿದೆ. ಎಂದು ಹೇಳಿದರು. ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ವರ್ಗಾಯಿಸಲಾಯಿತು.