Karavali
ಉಳ್ಳಾಲ: ಮಾ.1 ರಿಂದ 5 ರವರೆಗೆ ದೇರಳಕಟ್ಟೆಯಲ್ಲಿ ವಿಜೃಂಭಣೆಯ ಬೆಳ್ಮ ಉತ್ಸವ
- Mon, Feb 27 2023 07:05:50 PM
-
ಉಳ್ಳಾಲ, ಫೆ 27 (DaijiwsorldNews/HR): ಬೆಳ್ಮ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬೆಳ್ಮ ಉತ್ಸವ ಸಮಿತಿ ಪ್ರಸ್ತುತಪಡಿಸುವ ಭಾಷೆ, ಸಂಸ್ಕೃತಿ ಸಂಭ್ರಮ ಬಿಂಬಿಸುವ ಬೆಳ್ಮ ಉತ್ಸವ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳ ಜೊತೆಗೆ ವಿಜೃಂಭಣೆಯಿಂದ ಮಾ.1 ರಿಂದ 5 ರವರೆಗೆ ದೇರಳಕಟ್ಟೆಯಲ್ಲಿ ಜರಗಲಿದೆ ಎಂದು ಬೆಳ್ಮ ಗ್ರಾ.ಪಂ ಅಧ್ಯಕ್ಷ ಸಿ.ಎಂ ಅಬ್ದುಲ್ ಸತ್ತಾರ್ ಹೇಳಿದರು.
ಬೆಳ್ಮ ಗ್ರಾ.ಪಂ.ನಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾ.1 ರಂದು ಬೆಳಿಗ್ಗೆ 8.30ಕ್ಕೆ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ ಬೆಳ್ಮ ಗ್ರಾ.ಪಂ ಕಚೇರಿಯಿಂದ ಉದ್ಘಾಟನೆಗೊಳ್ಳಲಿದೆ. ಬೆಳ್ಮ ಗ್ರಾ.ಪಂ ಮಾಜಿ ಅಧ್ಯಕ್ಷ ಯೂಸುಫ್ ಬಾವ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ದೇರಳಕಟ್ಟೆಯ ಮೈದಾನದಲ್ಲಿ 10ಕ್ಕೆ ಶಾಸಕ ಯು.ಟಿ ಖಾದರ್ ಧ್ವಜಾರೋಹಣ ನಡೆಸಲಿದ್ದಾರೆ. ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವಿಶಾಲ್ ಹೆಗ್ಡೆ, ಯೆನೆಪೋಯ ಸಂಸ್ಥೆಯ ವೈ. ಅಬ್ದುಲ್ಲಾ ಕುಂಞ, ಕಣಚೂರು ಸಂಸ್ಥೆಯ ಯು.ಕೆ ಮೋನು ಮುಂತಾದವರು ಭಾಗವಹಿಸಲಿದ್ದಾರೆ. ವಸ್ತು ಪ್ರದರ್ಶನಕ್ಕೆ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಜ್ (ಮೈಸೂರು ಬಾವಾ) ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 11.45ಕ್ಕೆ ಉಳ್ಳಾಲ ತಾಲೂಕು ವ್ಯಾಪ್ತಿಯ ಪಂ. ಸದಸ್ಯರು, ಅಧಿಕಾರಿಗಳು , ಸಿಬ್ಬಂದಿ, ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರು ಪಟ್ಟಣ ಪಂಚಾಯಿತಿಗಳ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ರೀಡಾ ಸ್ಪರ್ಧೆ ನಡೆಯಲಿದೆ. ಒಲಿಂಪಿಯನ್ ಸಹನಾ ಕುಮಾರಿ ಕ್ರೀಡಾ ಸಂಗಮಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 7 ರಿಂದ ಶೃತಿಲಯ ಕಲಾಕೇಂದ್ರ ಕುತ್ತಾರು ಇವರಿಂದ ಜಾನಪದ ವೈಭವ, ಮಂಗಳಾ ಕಲಾವಿದೆರ್ ಕುಡ್ಲ ಇವರಿಂದ ಕಟ್ಟೆದ ಗುಳಿಗೆ ಕೈ ಬುಡಾಯೆ ಸಾಮಾಜಿಕ ಹಾಸ್ಯಮಯ ತುಳು ನಾಟಕ ನಡೆಯಲಿದೆ.
ಮಾ.2 ರಂದು ಮುಕ್ತ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ. ಅಂದು ನಡೆಯುವ ಕ್ರೀಡಾಸಂಗಮದಲ್ಲಿ ಸ್ಥಳಿಯ ವೈದ್ಯಕೀಯ, ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ರೀಡಾ ಸ್ಪರ್ಧೆ ನಡೆಯಲಿದ್ದು, ಮಂಗಳೂರು ವಿ.ವಿ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಚಾಲನೆ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳ್ಮ ಗ್ರಾಮ ತಂಡಗಳಿಂದ ದಫ್ ಕಾರ್ಯಕ್ರಮ, ಸಂತ ಅಲೋಶಿಯಸ್ ಕಾಲೇಜು ವತಿಯಿಂದ ಕೊಂಕಣಿ ಕಾರ್ಯಕ್ರಮ ಹಾಗೂ ಹಿಟ್ ಕಲಾವೇದಿ ಕಣ್ಣೂರು ಇವರಿಂದ ಒಪ್ಪಣೆ ಪಾಟ್ ಹಾಗೂ ಕೋಲ್ ಕಲಿ ನಡೆಯಲಿದೆ.
ಮಾ.3ರಂದು ಉಳ್ಳಾಲ ತಾಲೂಕಿನ ಸ್ತ್ರೀಶಕ್ತಿ ಗುಂಪಿನ ಮಹಿಳೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಾರ್ವಜನಿಕ ಮಹಿಳೆಯರಿಗೆ ಗ್ರಾಮೀನ ಕ್ರೀಡಾ ಸ್ಪರ್ಧೆ ಜರಗಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶೈಲಾ ಕೆ. ಕಾರ್ಗಿ ಚಾಲನೆ ನೀಡಲಿದ್ದಾರೆ, ಸಭಾ ಕಾರ್ಯಕ್ರಮದಲ್ಲಿ ಜೆ.ಆರ್ ಲೋಬೊ, ಮೊಯ್ದೀನ್ ಬಾವಾ, ಅಝೀಝ್ ಮಲಾರ್ ಮುಂತಾದವರು ಭಾಗವಹಿಸಲಿದ್ದಾರೆ. ಸಾಂಸಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಅಮೇಝಿಂಗ್ ಡ್ಯಾನ್ಸ್ ಸ್ಟುಡಿಯೋ ಮತ್ತು ಫೋಕಲ್ ಕಿಡ್ ಡ್ಯಾನ್ಸ್ ಅಕಾಡೆಮಿ ಇವರಿಂದ ಮ್ಯೂಸಿಕಲ್ ಆರ್ಕೆಸ್ಟ್ರಾ ಮತ್ತು ಡ್ಯಾನ್ಸ್ ಕಾರ್ಯಕ್ರಮ ಬಳಿಕ ಯಕ್ಷರಂಗ ಕಲಾವಿದರಿಂದ ಮಹಿಷಮರ್ಧಿನಿ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ.4 ರಂದು ತಾಲೂಕಿನ ಪ್ರೌಢಶಾಲಾ ಬಾಲಕರಿಗೆ ಮುಕ್ತ ಕಬ್ಬಡ್ಡಿ ಪಂದ್ಯಾಟ ಮತ್ತು ಬಾಲಕಿಯರಿಗೆ ತ್ರೋಬಾಲ್ ಪಂದ್ಯಾಟ , ಮಂಗಳೂರು ವಿ.ವಿ ಕುಲಸಚಿವ ಕಿಶೋರ್ ಕುಮಾರ್ ಸಿ.ಕೆ ಚಾಲನೆ ನೀಡಲಿದ್ದಾರೆ. ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಮಿಥುನ್ ರೈ ಮೊದಲಾದವರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುರಕ್ಷಾ ಭಂಡಾರಿ ಮತ್ತು ಬಳಗದವರಿಂದ ಯಕ್ಷ ನೃತ್ಯ ವೈಭವ, ಗಾನ ವೈಭವ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಸ್ಟಾರ್ ಸಿಂಗರ್ಸ್ ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ.
ಮಾ.5 ರಂದು ಸಾರ್ವಜನಿಕರು, ಪತ್ರಕರ್ತರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ಕ್ರೀಡಾ ಸ್ಪರ್ಧೆಗೆ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಅಧ್ಯಕ್ಷ ವಸಂತ್ ಎನ್. ಕೊಣಾಜೆ ಚಾಲನೆ ನೀಡಲಿದ್ದಾರೆ. ಬಳಿಕ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ತೋನ್ಸೆ ಪುಷ್ಕಳ್ ಕುಮಾರ್ ಅವರಿಂದ ಪುರಂದರದಾಸರ ಕಥಾ ಕೀರ್ತನ, ಸ್ಮೈಲ್ ಸ್ಟಾರ್ ರೆಹಮಾನ್ ಕೊಣಾಜೆ ಇವರಿಂದ ಮಿಮಿಕ್ರಿ, ಡಿ.ಜೆ ಸಿರಾಜ್ ತಂಡದಿಂದ ಬ್ಯಾರಿ ಮೇಳ, ಅಪೂರ್ವ ಜಾದೂ ಪ್ರದರ್ಶನ, ಬಲೆ ತೆಲಿಪಾಲೆ ಖ್ಯಾತಿಯ ಪ್ರವೀಣ್ ಮರ್ಕಮೆ ತಂಡದಿಂದ ನಿರಂತರ ಹಾಸ್ಯ ಚಟಾಕಿ ನಡೆಯಲಿದೆ. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ನಡೆಸಲಿದ್ದು, ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸದಸ್ಯ ಡಾ| ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಡಿ.ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಮಾಜಿ ಶಾಸಕ ರಮಾನಾಥ ರೈ, ಕೆ.ಜಯರಾಮ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಬೆಳ್ಮ ಉತ್ಸವ ಸಮಿತಿಯ ಪ್ರಧಾನ ಸಂಚಾಲಕ ಚಂದ್ರಹಾಸ್ ಶೆಟ್ಟಿ ಮಾತನಾಡಿ, ಜಾತಿ, ಮತ ಬೇಧಭಾವವಿಲ್ಲದೆ ರಾಜಕೀಯೇತರವಾಗಿ ನಡೆಯುವ ಉತ್ಸವವಾಗಿದೆ. ಎಲ್ಲರೂ ಒಗ್ಗಟ್ಟಿನಲ್ಲಿ ಸೇರುವ ದೃಷ್ಟಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿದ್ದು, ಸಮಾಜಕ್ಕೆ ಕೊಡುಗೆಯನ್ನು ನೀಡುವ ಉದ್ದೇಶ, ಹಾಗೂ ನೆಲ, ಭಾಷೆ, ಸಂಸ್ಕೃತಿ ಕಲೆಗಾಗಿ ಕೊಡುಗೆಯನ್ನು ನೀಡಲಾಗುತ್ತಿದೆ ಎಂದರು.
ಉತ್ಸವ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಐತಿಹಾಸಿಕ ಕಾರ್ಯಕ್ರಮ ಇದಾಗಿದ್ದು, ರಸಮಂಜರಿ, ಮನರಂಜನೆ ಎಲ್ಲಾ ರೀತಿಯ ಕಾರ್ಯಕ್ರಮಗಳಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗಿಯಾಗಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭ ಬೆಳ್ಮ ಗ್ರಾ.ಪಂ ಸದಸ್ಯ ಇಬ್ರಾಹಿಂ, ಮಾಜಿ ಸದಸ್ಯ ಕಬೀರ್ ಉಪಸ್ಥಿತರಿದ್ದರು.