ಉಡುಪಿ, ಫೆ 26 (DaijiworldNews/SM): ಆದಿವಾಸಿ ಸಮುದಾಯ ಭವನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ವೇಳೆ ನೂತನ ಕಟ್ಟಡದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಉಡುಪಿ ಶಾಸಕ ರಘುಪತಿ ಭಟ್ ಗರಂ ಆಗಿದ್ದಾರೆ. ಉಡುಪಿ ಜಿಲ್ಲೆಯ ಅತ್ಯಂತ ಹಿಂದುಳಿದ ಕೊರಗ ಸಮುದಾಯಕ್ಕೆ ಮಂಜೂರಾದ ಕಟ್ಟಡವೂ, ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಆದರೆ, ಅವ್ಯವಸ್ಥೆಯಲ್ಲಿದ್ದ ಕಾರಣದಿಂದಾಗಿ ಇಲಾಖೆಯ ಇಂಜಿನಿಯರ್ ಗಳ ವಿರುದ್ಧ ಶಾಸಕ ಭಟ್ ಕಿಡಿ ಖಾರಿದ್ದಾರೆ.
ಶಾಸಕನಾಗಿ ಈ ಕಟ್ಟಡ ನಿರ್ಮಾಣ ಮಾಡಿರುವ ರೀತಿ ನನಗೆ ಸಮಾಧಾನ ಕೊಟ್ಟಿಲ್ಲ. ಶುಭಕಾಲದಲ್ಲಿ ಟೀಕೆ ಮಾಡಿದೆ ಎಂದು ಭಾವಿಸಬೇಡಿ. ಇದು ಕೊರಗರ ಸಮುದಾಯ ಭವನ ಈ ಕಟ್ಟಡವನ್ನು ತುಂಬಾ ಕಳಕಳಿಯಿಂದ ಕಟ್ಟಬೇಕಿತ್ತು. ಕಟ್ಟಡ ನಿರ್ಮಾಣದಲ್ಲಿ ತುಂಬಾ ಲೋಪದೋಷ ಮಾಡಿದ್ದೀರಿ. ಪೂರ್ವ ಸೂಚನೆ ಕೊಟ್ಟರು ಉತ್ತಮ ಫ್ಯಾನ್ ಗಳನ್ನು ಬಳಸಿಲ್ಲ. ಕೊರಗರ ಸಮುದಾಯ ಭವನಕ್ಕೆ ಉತ್ತಮ ಫ್ಯಾನ್ ಹಾಕುವ ಸೌಜನ್ಯ ನಿಮ್ಮ ಇಲಾಖೆಗೆ ಇಲ್ವಾ? ಸಭಾಂಗಣದಲ್ಲಿ ಇಕೋ ಎಷ್ಟುತ್ತೆ ನೋಡಿ, ಈ ವ್ಯವಸ್ಥೆ ಸರಿ ಮಾಡಲು ನಿಮ್ಮ ಇಂಜಿನಿಯರಿಂಗ್ ಇಲಾಖೆಗೆ ಆಗಲ್ವಾ? ಮಂತ್ರಿಗಳು ಸಭೆಗೆ ಬಂದಿದ್ರೆ ಅವರ ಎದುರಲ್ಲೇ ಹೇಳುತ್ತಿದ್ದೆ. ಕೇವಲ ಮದುವೆ ಸಮಾರಂಭ ಮಾಡಲು ಈ ಭವನ ಅಲ್ಲ. ಈ ಸಭಾಭವನದಲ್ಲಿ ವಿಚಾರಗೋಷ್ಠಿ ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ನಾನು ಮಾತಾಡಿದ್ದು ಜನರಿಗೆ ಕೇಳುವುದಿಲ್ಲ ಜನರು ಮಾತನಾಡಿದ್ದು ಇಕೋ ಆಗ್ತಾ ಇದೆ. ಮೂರು ತಿಂಗಳೊಳಗೆ ಎಲ್ಲಾ ವ್ಯವಸ್ಥೆ ಸರಿ ಮಾಡಬೇಕು. ಇದು ಕೊರಗ ಸಮುದಾಯದ ಪ್ರಪ್ರಥಮ ಸಮುದಾಯ ಭವನವಾಗಿದೆ. ಮುಂದೆ ಪರಿಶಿಷ್ಟ ಪಂಗಡದವರ ಸಮುದಾಯ ಭವನ ಮಾಡುವಾಗ ಗಮನವಿಟ್ಟು ಮಾಡಿ.ಒಂದು ವಾರದೊಳಗೆ ಏನು ಮಾಡುತ್ತೀರಿ ಹೇಳಿ. ನಂತರ ಚುನಾವಣಾ ನೀತಿ ಸಂಹಿತೆ ಬರುತ್ತೆ. ನಿಮ್ಮ ಇಲಾಖೆಯಿಂದ ಆಗದಿದ್ದರೆ ಹೇಳಿ ನಗರಸಭೆಯಿಂದ ಮಾಡುತ್ತೇವೆ ಎಂದು ಗರಂ ಆಗಿದ್ದಾರೆ.
ಈ ರೀತಿ ನಿರ್ಲಕ್ಷ್ಯ ಮಾಡುವುದು ಶೋಭೆಯಲ್ಲ. ನಮ್ಮ ಜಿಲ್ಲೆಯ ಅತ್ಯಂತ ಹಿಂದುಳಿದ ಸಮಾಜ ಕೊರಗರಾಗಿದ್ದಾರೆ. ಅವರ ಶ್ರೇಯೋಭಿವೃದ್ಧಿಯ ಜವಾಬ್ದಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇರಬೇಕೆಂದರು.