ಬಂಟ್ವಾಳ, ಫೆ 26 (DaijiworldNews/SM): ಸ್ವಾತಂತ್ರ್ಯ ಬಳಿಕ ದೇಶದ ಶಿಕ್ಷಣ ಮಟ್ಟ ವೃದ್ಧಿಸುವ ಜತೆಗೆ ಕ್ರೈಂ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಅದು ನಿಯಂತ್ರಣಕ್ಕೆ ಬರಬೇಕಾದರೆ ಧಾರ್ಮಿಕ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ರಾಜ್ಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸಜೀಪಮೂಡ ಗ್ರಾಮದ ನಗ್ರಿ ಶ್ರೀ ಶಾರದಾ ಮಂದಿರದ ಬಳಿ ರಾಜ್ಯ ಸರಕಾರದ ೮೫ ಲಕ್ಷ ರೂ.ಸೇರಿದಂತೆ ಒಟ್ಟು ೧.೨೫ ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಶಾರದಾ ಸಮುದಾಯವನ್ನು ಉದ್ಘಾಟಿಸಿ ಮಾತನಾಡಿದರು.
ಸುಸ್ಥಿರ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರೀ ಶಾರದಾ ಮಂದಿರ ವಿಶೇಷ ಪಾತ್ರ ವಹಿಸಲಿದ್ದು, ಇಡೀ ರಾಜ್ಯದಲ್ಲಿ ಸಾತ್ವಿಕ ಮನಸ್ಸಿನ ಶಾಸಕರಾಗಿ ಗುರುತಿಸಿಕೊಂಡ ಶಾಸಕ ರಾಜೇಶ್ ನಾಯ್ಕ್ ಅವರು ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ್ದಾರೆ. ಸರಕಾರದ ಅನುದಾನದ ಜತೆಗೆ ಅದಕ್ಕೆ ಹೆಚ್ಚಿನ ಅನುದಾನ ಒಟ್ಟು ಸೇರಿಸಿ ವಿವೇಕ್ ಶೆಟ್ಟಿ, ರತ್ನಾಕರ ಪೂಜಾರಿ ನಾಡಾರ್ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಸರಕಾರ ಎಲ್ಲವನ್ನು ನೀಡಲು ಸಾಧ್ಯವಿಲ್ಲ, ಗ್ರಾಮದ ಜನರ ಸಹಕಾರ,ಸಂಘಸಂಸ್ಥೆಗಳ ಸಹಕಾರ ಸಿಕ್ಕಿದಾಗ ಸರಕಾರದ ಜೊತೆಯಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಬಲ ಸಿಗಲಿದೆ ಎಂದು ಅವರು ತಿಳಿಸಿದರು. ಮುಂಬಯಿನ ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು ಮಾತನಾಡಿ, ಯುವಕರ ಶ್ರಮ, ಪ್ರೀತಿಯ ಸಂಕೇತವಾಗಿ ತಾನು ಕೂಡ ಈ ಪುಣ್ಯಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ಹರಿಣಾಕ್ಷಿ, ಪುಣೆಯ ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಮುಂಬಯಿನ ಉದ್ಯಮಿ ಜಯರಾಮ ಹೆಗ್ಡೆ ಕುಡ್ವಪಾಲು, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಭಟ್ ನಗ್ರಿ, ಮಂಗಳೂರಿನ ಉದ್ಯಮಿ ಮೋನಪ್ಪ ಪೂಜಾರಿ ನಾಡಾರ್, ಚಾರ್ಟೆಡ್ ಅಕೌಂಟೆಂಟ್ ಪೌದನ್ ಕುಮಾರ್ ನಗ್ರಿ, ಬೆಂಗಳೂರು ಎಚ್.ಎ.ಎಲ್.ನ ಸೀನಿಯರ್ ಮ್ಯಾನೇಜರ್ ಮೋಹನ್ ನಾಯ್ಕ ನಗ್ರಿ, ನಗ್ರಿ ಯುವಕ ಮಂಡಲದ ಅಧ್ಯಕ್ಷ ಸುಂದರ ಕುಲಾಲ್ ನಗ್ರಿ, ಶ್ರೀ ಶಾರದಾ ಮಹಿಳಾ ಸಮಿತಿಯ ಅಧ್ಯಕ್ಷರಾದ ಮಿತ್ರಾಕ್ಷಿ ಯಾದವ ಬಂಗೇರ ಉಪಸ್ಥಿತರಿದ್ದರು.