ಮಂಗಳೂರು, ಫೆ 26 (DaijiworldNews/MS): ಇಲ್ಲಿನ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸುಮಾರು 9ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಗರದ ಮಂಗಳಾ ಕ್ರೀಡಾಂಗಣದ 80 ಮೀ. ಉದ್ದದ ನೂತನ ಪೆವಿಲಿಯನ್, ವ್ಯಾಯಾಮ ಶಾಲೆ, ಫಿಸಿಯೋಥೆರಪಿ ವ್ಯವಸ್ಥೆ, ಅಧಿಕಾರಿಗಳ ಕೊಠಡಿಯನ್ನು ಸಂಸದರಾದ ನಳಿನ್ಕುಮಾರ್ ಕಟೀಲ್ ಅವರು ಫೆ.26ರ ಭಾನುವಾರ ಬೆಳಿಗ್ಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಯವರು ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಒದಗಿಸಿಕೊಟ್ಟರು, ಇದೀಗ ಈ ಕಾಮಗಾರಿಗಳ ಅನುಷ್ಠಾನದಲ್ಲಿ ಮಂಗಳೂರು ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ, 7೦೦ ಕೋಟಿ ರೂ.ಗಳನ್ನು ವಿವಿಧ ಕಾಮಗಾರಿಗಳಿಗೆ ವಿನಿಯೋಗಮಾಡಲಾಗಿದೆ. ಆರಂಭಿಕ ಹಂತದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ವಿಳಂಬಗೊಂಡಿದ್ದವು. ವೇದವ್ಯಾಸ ಕಾಮತ್ ಅವರು ಶಾಸಕರಾದ ಬಳಿಕ ಯೋಜನೆಯ ಎಲ್ಲ ಕಾಮಗಾರಿಗಳಿಗೆ ವೇಗ ದೊರೆತಿದೆ ಎಂದರು.
ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಆಶಯದಂತೆ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಪೆವಿಲಿಯನ್, ಜಿಮ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರಿನಲ್ಲಿ ಶೀಘ್ರದಲ್ಲಿ ಕಬಡ್ಡಿ, ಶಟಲ್ ಕೋರ್ಟ್, ಈಜುಕೊಳ ಉದ್ಘಾಟನೆಗೊಳ್ಳಲಿದೆ. ಮಂಗಳೂರು ಅಭಿವೃದ್ಧಿ ಮೂಲಕ ಬದಲಾವಣೆ ಆಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಮೊದಲ ಬಾರಿಗೆ ರಸ್ತೆ ಅಭಿವೃದ್ಧಿಗೆ 3೦೦ ಕೋಟಿ ರೂ. ಅನುದಾನ ನೀಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಮಾರ್ಟ್ ಸಿಟಿ ನೀಡುವ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ಎಲ್ಲ ಕಾಮಗಾರಿಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಮಾರ್ಚ್ 5ರಂದು 3೦೦ ಕೋಟಿ ರೂ.ವೆಚ್ಚದ ಜಲಾಭಿಮುಖ ಪ್ರದೇಶ ಅಭಿವೃದ್ಧಿ ಯೋಜನೆ ಹಾಗೂ ಸೆಂಟ್ರಲ್ ಮಾರ್ಕೆಟ್ ಕಟ್ಟಡಕ್ಕೆ ಶಿಲಾನ್ಯಾಸ ನಡೆಯಲಿದೆ. ಸಿಆರ್ಝೆಡ್ ಸಮಸ್ಯೆ, ಖಾಸಗಿ ಜಾಗ ಪಡೆಯುವಲ್ಲಿ ಉಂಟಾದ ಸಮಸ್ಯೆಯಿಂದ ಜಲಾಭಿಮುಖ ಪ್ರದೇಶ ಅಭಿವೃದ್ಧಿ ಯೋಜನೆ ವಿಳಂಬಗೊಂಡಿತ್ತು ಎಂದರು.
ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಹಾನಗರ ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್ಗಳಾದ ಸಂಧ್ಯಾ ಆಚಾರ್, ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ್ ಶೆಟ್ಟಿ, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ, ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಅರುಣ್ಪ್ರಭ, ಚಂದ್ರಕಾಂತ್ ಮತ್ತಿತರರು ಉಪಸ್ಥಿತರಿದ್ದರು.