ಉಡುಪಿ, ಫೆ 25 (DaijiworldNews/MS): ಜೀವನವಿಡೀ ಭಿಕ್ಷಾಟನೆ ಮಾಡಿ ಸಂಪಾದಿಸಿದ ಹಣವನ್ನು ತನ್ನಿಬ್ಬರು ಗಂಡು ಮಕ್ಕಳಿಗೆ ನೀಡಿ, ಇದೀಗ ವೃದ್ಧಾಪ್ಯದಲ್ಲಿ ಹಾಸಿಗೆ ಹಿಡಿದು ಮಕ್ಕಳಿಂದಲೇ ನಿರ್ಲಕ್ಷ್ಯಕ್ಕೊಳಗಾದ ಮಹಾಮಾತೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಹಿರಿಯ ನಾಗರಿಕರ ಸಹಾಯವಾಣಿಯ ಸಿಬ್ಬಂದಿಗಳ ನೆರವಿನಿಂದ ಬೈಲೂರು ಸಮೀಪದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ಈ ನೃತದೃಷ್ಟ ಮಹಿಳೆ ಕಾವೇರಮ್ಮ (80) ಮೂಲತ: ತಮಿಳುನಾಡಿನವರು. ಉಡುಪಿ, ಮಲ್ಪೆ ಪರಿಸರದಲ್ಲಿ ಹಲವಾರು ವರ್ಷಗಳಿಂದ ಭಿಕ್ಷಾಟನೆಯನ್ನೇ ತನ್ನ ಕಾಯಕವನ್ನಾಗಿಸಿಕೊಂಡಿದ್ದ ಈಕೆ, ಸಂಪಾದಿಸಿದ ಹಣವನ್ನು ತಮಿಳುನಾಡಿನಿಂದ ಅಗಾಗ್ಗೆ ಬರುತ್ತಿದ್ದ ತನ್ನ ಮಕ್ಕಳಿಗೆ `ದಾನ ' ಮಾಡಿ ಮತ್ತೆ ಬರಿಗೈಯ ದಾಸಳಾಗಿ `ಭಿಕ್ಷೆ ' ಬೇಡುತ್ತಿದ್ದರು.
ವೃದ್ಧೆ ತಿಂಗಳ ಹಿಂದೆ ತೀರಾ ಅನಾರೋಗ್ಯಕ್ಕೀಡಾದಾಗ ಸಮಾಜ ಸೇವಕ ವಿಶು ಶೆಟ್ಟಿ ಅವರು ಹಿರಿಯ ನಾಗರಿಕರ ಸಹಾಯವಾಣಿಯ ಸಿಬ್ಬಂದಿಗಳ ನೆರವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಇದೀಗ ವೃದ್ಧೆ ಹಾಸಿಗೆ ಹಿಡಿದಿದ್ದಾರೆ. ತಾಯಿಯನ್ನು ಭಿಕ್ಷಾಟನೆಗೆ ದೂಡಿ, ಹಣ ಪೀಕಿಸುತ್ತಿದ್ದ ಮಕ್ಕಳು ತಾಯಿಯ ಪರಿಸ್ಥಿತಿ ಚಿಂತಾಜನಕವಾಗಿದ್ದರೂ, ಸುತಾರಾಂ ಈಕಡೆಗೆ ತಲೆ ಹಾಕಿಲ್ಲ !
ಆಸ್ಪತ್ರೆಯ ವೈದ್ಯರು ಕಾವೇರಮ್ಮನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ವಾರದ ಹಿಂದೆ ಸೂಚನೆ ನೀಡಿದ್ದು, ಸಹಾಯವಾಣಿಯವರು ವೃದ್ಧೆಯ ಮಕ್ಕಳನ್ನು ನಿರಂತರವಾಗಿ ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಆಸ್ಪತ್ರೆಗೆ ಓಡೋಡಿ ಬರಬೇಕಾದ ಮಕ್ಕಳಿಂದ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಬದಲಿಗೆ ತಾಯಿಯ ಬಳಿ ಹಣವಿದ್ದರೆ ಕಳುಹಿಸಿ ಎಂದು ಉತ್ತರ ಸಿಕ್ಕಿರುವುದು ನಾಚಿಕೆಗೇಡು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ವೃದ್ಧೆಯ ಶೋಚನೀಯ ಪರಿಸ್ಥಿತಿಯನ್ನು ಕಂಡು ವಿಶು ಶೆಟ್ಟಿ ಅವರು ಬೈಲೂರು ರಂಗನಪಲ್ಕೆಯ ಹೊಸಬೆಳಕು ಆಶ್ರಮವನ್ನು ಸಂಪರ್ಕಿಸಿದಾಗ. ಆಶ್ರಮದ ಮುಖ್ಯಸ್ಥರಾದ ತನುಲಾ ತರುಣ್ ಹಾಗೂ ವಿನಯಚಂದ್ರ ಅವರು ಆಶ್ರಯ ನೀಡಲು ಒಪ್ಪಿ ಮಾನವೀಯತೆ ಮೆರೆದಿದ್ದಾರೆ.
ವೃದ್ಧೆಯನ್ನು ಖಾಸಗಿ ಆಂಬುಲೆನ್ಸ್ ಮೂಲಕ ವಿಶು ಶೆಟ್ಟಿ ಅವರು ಹಿರಿಯ ನಾಗರಿಕ ಸಹಾಯವಾಣಿ ಸಿಬ್ಬಂದಿಗಳಾದ ಅಶ್ವಿನಿ ಹಾಗೂ ರೋಶನ್.ಕೆ ರವರ ನೆರವಿನಿಂದ ಶುಕ್ರವಾರ ಆಶ್ರಮಕ್ಕೆ ದಾಖಲಿಸಿದ್ದಾರೆ.
ಮಕ್ಕಳ ಮೇಲೆ ಕ್ರಮ ಜರುಗಿಸಿ : ತಂದೆತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು. ತಪ್ಪಿದರೆ ಅವರ ಮೇಲೆ ಕಾನೂನು ಕ್ರಮಕ್ಕೆ ಅವಕಾಶವಿದೆ. ಆದ್ದರಿಂದ ಕಾವೇರಮ್ಮನ ಪ್ರಕರಣದಲ್ಲಿಯೂ ಸಂಬAಧಟ್ಟ ಇಲಾಖೆಗಳು, ಹಿರಿಯ ನಾಗರಿಕರ ಸಹಾಯವಾಣಿಯವರು ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಿ ವೃದ್ಧೆಗೆ ನ್ಯಾಯ ದೊರಕಿಸಬೇಕು ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ. ಇದೊಂದು ಅತ್ಯಂತ ಅಮಾನವೀಯ ಪ್ರಕರಣವಾಗಿದ್ದು, ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಗಳು ಕೂಡಾ ವೃದ್ಧೆಯ ನೆರವಿಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.