ಉಡುಪಿ, ಫೆ 25 (DaijiworldNews/MS): ದಕ್ಷಿಣಕನ್ನಡ , ಉಡುಪಿ , ಉತ್ತರಕನ್ನಡ , ಶಿವಮೊಗ್ಗ , ಸಾಗರ , ಕೊಡಗು ,ಬೆಂಗಳೂರು , ಚಿಕ್ಕಮಗಳೂರು , ಮುಂತಾದ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ಹರಡಿ ಆಯಾಯ ಪ್ರದೇಶಗಳಿಗೆ ತಮ್ಮ ಸಾಧನೆಗಳ ಮೂಲಕ ಗಮನಾರ್ಹ ಕೊಡುಗೆ ನೀಡುತ್ತಿರುವ ದೇವಾಡಿಗ , ಶೇರಿಗಾರ್ , ಮೊಯ್ಲಿ ಮುಂತಾದಹ ಹೆಸರುಗಳಿಂದ ಗುರುತಿಸಲ್ಪಡುವ ಸಜ್ಜನ ಸಮಾಜವಾಗಿರುವ ದೇವಾಡಿಗ ಸಮಾಜಕ್ಕೆ ದೇವಾಡಿಗ ನಿಗಮ ಮಂಡಳಿ ಮತ್ತು ಸೂಕ್ತ ರಾಜಕೀಯ ಪ್ರಾತಿನಿಧಿತ್ವ ನೀಡಬೇಕು ಎಂದು ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ ಆಗ್ರಹಿಸಿದ್ದಾರೆ.
“ದೇವಾಡಿಗ ಸಮಾಜಕ್ಕೆ ಯಾವ ಅನುದಾನಗಳು ಕೂಡ ಸರಿಯಾಗಿ ಸಿಗುತ್ತಿಲ್ಲ. ದೇವಸ್ಥಾನಗಳಲ್ಲಿ ಹಲವಾರು ತಲೆಮಾರಿನಿಂದ ಸೇವೆ ನಡೆಸುತ್ತಾ , ಎಲ್ಲಾ ವಿಧಿವಿದಾನಗಳನ್ನು ತಿಳಿದಿದ್ದರು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳಲ್ಲಿಇತ್ತೀಚಿನ ದಿನಗಳಲ್ಲಿ ನಮ್ಮನ್ನು ಹೊರಗೆ ಇಡುವ ಹುನ್ನಾರ ನಡೆಯುತ್ತಿದೆ . ನಾವು ದೇವಾಡಿಗ ಅಭಿವೃದ್ದಿ ನಿಗಮ ಮಂಡಳಿಗೆ 2021 ರಲ್ಲಿ ಬೇಡಿಕೆ ಇಟ್ಟಿದ್ದು ಹೆಚ್ಚಿನ ಸಮುದಾಯದವರಿಗೆ ಮಂಜೂರಾತಿ ದೊರಕಿದರೂ ನಮ್ಮ ಸಮಾಜವನ್ನುಕಡೆಗಣಿಸಲಾಗಿದೆ . ಈ ಬಗ್ಗೆ ಸ್ಥಳೀಯ ಶಾಸಕರು, ಸಚಿವರು, ಲೋಕಸಭಾ ಸದಸ್ಯರು, ಹಿಂದುಳಿದ ಆಯೋಗಗಳನ್ನೂ ಸಮಯ ಸಮಯಕ್ಕೆ ಮನವಿ ಮಾಡಿದರೂ, ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ”
“ಎಲ್ಲಾ ಸಮಾಜಕ್ಕೂ ಒಂದು ಅಥವಾ ಎರಡು ಶಾಸಕರ ಸ್ಥಾನಮಾನ ನೀಡುತ್ತಿರುವಾಗ , ಸುಮಾರು 8 ಲಕ್ಷದಿಂದ 10 ಲಕ್ಷ ಜನಸಂಖ್ಯೆಯನ್ನು ದೇವಾಡಿಗ ಸಮುದಾಯ ಹೊಂದಿದೆ. ಮಾತ್ರವಲ್ಲದೇ ಬೈಂದೂರು ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ದೇವಾಡಿಗ ಸಮಾಜಕ್ಕೆ ಸೇರಿದ ಮತದಾರರು ಇದ್ದಾರೆ. ಈ ವಿಧಾನಸಭಾ ಚುನಾವಣೆಯಲ್ಲಿ ದೇವಾಡಿಗ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕು. ನಮ್ಮ ಸಮಾಜದ ಹಲವಾರು ಮಂದಿ ಯುವಕರು ಗಳು ಕೂಡಾ ವಿವಿಧ ಪಕ್ಷಗಳಲ್ಲಿ ಹುದ್ದೆ ಯನ್ನು ಹೊಂದಿದ್ದು ನಾಯಕತ್ವ ಗುಣವನ್ನು ಬೆಳೆಸಿಕೊಂಡಿದ್ದಾರೆ, ಆದರೆ ಅವರಿಗೆ ಸೂಕ್ತವಾದ ಮಟ್ಟಕ್ಕೆ ಬೆಳೆಯಲು ಪಕ್ಷಗಳ ಇತರ ಉನ್ನತ ನಾಯಕರುಗಳು ಅವಕಾಶ ಮಾಡಿಕೊಡುತ್ತಿಲ್ಲ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕು ವೀರಪ್ಪ ಮೊಯಿಲಿ ಅವರು ನಮ್ಮ ಸಮಾಜದವರು ಆದರೂ ಸಹ ಸಮಾಜಕ್ಕಾಗಿ ಅವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಈಗ ಅವರು ಕಾಂಗ್ರೆಸ್ ನಲ್ಲಿ ಉನ್ನತ ಹುದ್ದೆಯಲ್ಲಿ ಇರುವುದರಿಂದ ಎಲ್ಲಾ ಸಮುದಾಯದವರನ್ನು ಅವರು ಸಮಾನವಾಗಿ ಕಾಣವೇಕಾಗಿದ ” ಎಂದು ಅವರು ಹೇಳಿದ್ದಾರೆ.
ನಮ್ಮ ಸಮಾಜದ ಶ್ರೇಯೋಭಿವೃದ್ದಿಗಾಗಿ ದೇವಾಡಿಗ ಅಭಿವೃದ್ದಿ ನಿಗಮದ ಸ್ಥಾಪನೆ ಮಾಡಿ ಸೂಕ್ತ ಅನುದಾನ ನೀಡಬೇಕು . ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಲ್ಲಿ ಪ್ರಮುಖ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ನಮ್ಮ ಸಮಾಜದ ಬಂಧುಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶನೀಡಬೇಕು . ದೇವಸ್ಥಾನ ಮತ್ತಿತರ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಲ್ಲಿನ ದಾರ್ಮಿಕ ವಿಧಿ ವಿಧಾನಗಳ ಬಗ್ಗೆ ಚೆನ್ನಾಗಿ ತಿಳಿದವರಾಗಿರುವ ನಮ್ಮ ಸಮಾಜದ ಬಂಧುಗಳಿಗೆ ಆಯಾಯ ಕ್ಷೇತ್ರಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮಹಾಮಂಡಳ ಆಗ್ರಹಿಸಿದೆ. ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಅರಗ ಜ್ಷಾನೇಂದ್ರ ಅವರನ್ನು ಮಹಾಮಂಡಳವು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗಿದೆ ಎಂದಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಹಾಮಂಡಳದ ಪ್ರಧಾನ ಕಾರ್ಯದರ್ಶಿಯಾದ ಹಿರಿಯಡ್ಕ ಮೋಹನದಾಸ್, ಕಾರ್ಯದರ್ಶಿ ಗಣೇಶ್ ದೇವಾಡಿಗ ಅಂಬಲಪಾಡಿ, ದೇವಾಡಿಗ ಸೇವಾ ಸಂಘದ ಅಧ್ಯಕ್ಷರಾದ ಪ್ರಸಾದ್ ಶೇರಿಗಾರ್, ಸದಸ್ಯರಾದ ರತ್ನಾಕರ್ ಉಪಸ್ಥಿತರಿದ್ದರು.