ಕಾರ್ಕಳ, ಫೆ 25 (DaijiworldNews/DB): ಬಿಸಿಲಿನ ತಾಪಮಾನ ಹೆಚ್ಚಳದಿಂದಾಗಿ ಹಾವುಗಳು ತಂಪು ಹುಡುಕಿ ಮನೆ ಕಟ್ಟಡಗಳಿಗೆ ನುಗ್ಗುತ್ತಿರುವ ಘಟನೆಗಳು ಆಗಾಗ್ಗೆ ಮರು ಕಳಿಸುತ್ತಿವೆ. ಶನಿವಾರ ಒಂದೇ ದಿನ ಮೂರು ಮನೆಗಳೊಳಗೆ ನಾಲ್ಕು ನಾಗರಹಾವುಗಳು ಸೇರಿಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಪಕ್ಕದ ಮನೆಯೊಳಗೆ ಎರಡು ನಾಗರ ಹಾವುಗಳು ಶನಿವಾರ ಪತ್ತೆಯಾಗಿವೆ. ಹಾವುಗಳನ್ನು ನೋಡಿ ಆತಂಕಗೊಂಡ ಮನೆಯವರು ಕೂಡಲೇ ಉರಗಪ್ರೇಮಿ ಅನಿಲ್ ಪ್ರಭು ಅವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಅನಿಲ್ ಪ್ರಭು ಎರಡೂ ಹಾವುಗಳನ್ನು ಹಿಡಿದಿದ್ದಾರೆ.
ಇನ್ನು ಕಾರ್ಕಳ ನಗರದ ಸಾಲ್ಮರ್ ಮಿಲ್ ಬಳಿಯ ಮನೆಯೊಂದರಲ್ಲಿ ಹಾಗೂ ಶ್ರೀ ಭುವನೇಂದ್ರ ಕಾಲೇಜು ಬಳಿಯ ಮನೆಯೊಂದರಲ್ಲಿಯೂ ನಾಗರ ಹಾವುಗಳು ಹೊಕ್ಕಿದ್ದವು. ಈ ಮನೆಗಳಿಗೂ ಅನಿಲ್ ಪ್ರಭು ಅವರು ತೆರಳಿ ಮನೆಯೊಳಗೆ ಸೇರಿದ್ದ ಹಾವುಗಳನ್ನು ಹಿಡಿದಿದ್ದಾರೆ. ಬಳಿಕ ನಾಲ್ಕೂ ಹಾವುಗಳನ್ನು ದುರ್ಗ ಅಭಯಾರಣ್ಯದಲ್ಲಿ ಬಂಧಮುಕ್ತಗೊಳಿಸಿದ್ದಾರೆ.