ಉಡುಪಿ, ಫೆ 25 (DaijiworldNews/DB): ನಮ್ಮ ದೇಶ ಹೇಗೆ ಅಭಿವೃದ್ಧಿಯಲ್ಲಿ ದಾಪುಗಾಲು ಇಡುತ್ತಿದೆಯೋ ಅದೇ ವೇಗದಲ್ಲಿ ನಮ್ಮ ರಾಜ್ಯ ಕೂಡ ಅಭಿವೃದ್ಧಿಯಲ್ಲಿ ಮುನ್ನುಗ್ಗುತ್ತಿದೆ ಎಂಬುದಕ್ಕೆ ರಾಜ್ಯ ಬಜೆಟ್ ಸ್ಪಷ್ಟ ಉದಾಹರಣೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕ ದಿವಾಕರ್ ಶೆಟ್ಟಿ ಹೇಳಿದ್ದಾರೆ.
ಬಜೆಟ್ ಕುರಿತಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಎಸ್.ಟಿ ಸಂಗ್ರಹ ಕಳೆದ ವರ್ಷದ ಬಜೆಟ್ ನಿರೀಕ್ಷೆಗಿಂತ 11 ಸಾವಿರ ಕೋಟಿ ಹೆಚ್ಚು ಸಂಗ್ರಹವಾಗಿದೆ. ಅಬಕಾರಿ ಸಂಗ್ರಹ ನಿರೀಕ್ಷೆ 29 ಸಾವಿರ ಇತ್ತು. ಆದರೆ ಸಂಗ್ರಹ 32 ಸಾವಿರ ಕೋಟಿ ರೂ. ಆಗಿದೆ . ಜಿ.ಎಸ್.ಟಿ ಸಂಗ್ರಹದಲ್ಲಿ ದೊಡ್ಡ ರಾಜ್ಯಗಳನ್ನು ಹಿಂದಿಕ್ಕಿ ನಮ್ಮ ರಾಜ್ಯವು ಸತತ 2ನೇ ಸ್ಥಾನದಲ್ಲಿದೆ ಎಂದರು.
ರಾಜ್ಯಕ್ಕೆ ಎಫ್.ಡಿ.ಐ. ಹೆಚ್ಚೆಚ್ಚು ಹರಿದು ಬರುತ್ತಿದೆ. ಕಳೆದ ವರ್ಷದ ಬಜೆಟ್ ನ ಆದಾಯ ನಿರೀಕ್ಷೆ1.89 ಲಕ್ಷ ಕೋಟಿ ಆದರೆ ಸಂಗ್ರಹವಾದದ್ದು 2.12 ಲಕ್ಷ ಕೋಟಿ. ಶೇ. 12 ಹೆಚ್ಚುವರಿ ಆದಾಯ. ಇದೆಲ್ಲದರ ಅರ್ಥ ನಮ್ಮ ದೇಶದಂತೆಯೆ ನಮ್ಮ ರಾಜ್ಯವು ಕೂಡಾ ಅಭಿವೃದ್ದಿಯಲ್ಲಿ ಮುನ್ನುಗ್ಗುತ್ತಿದೆ. ಜನರ ಖರೀದಿ ಶಕ್ತಿ ಜಾಸ್ತಿಯಾಗುತ್ತಿದೆ. ಈ ಅಭಿವೃದ್ದಿ ವೇಗಕ್ಕೆ ಪೂರಕವಾಗಿ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಠಿಯನ್ನಿಟ್ಟುಕೊಂಡು ಎಲ್ಲಿಯೂ ಕೊರತೆ ಆಗದ ಹಾಗೆ ಅತ್ಮವಿಶ್ವಾಸದಿಂದ ಈ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ ಮಾತನಾಡಿ, ಮಾರ್ಚ್ 12ರಂದು ಉಡುಪಿ ಜಿಲ್ಲೆಗೆ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಆಗಮಿಸಲಿದೆ. ಜಿಲ್ಲೆಯ ಕಾರ್ಕಳ, ಕಾಪು, ಉಡುಪಿ, ಕುಂದಾಪುರ, ಮತ್ತು ಬೈಂದೂರುವಿನಲ್ಲಿ ರೊಡ್ ಶೋ ಮತ್ತು ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಜಿಲ್ಲಾ ಸಹವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಉಪಸ್ಥಿತರಿದ್ದರು.