ಕಾರ್ಕಳ, ಫೆ 25 (DaijiworldNews/MS): ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯದ ಉಗ್ಗೆದಬೆಟ್ಟು ಎಂಬಲ್ಲಿ ಮರಳುಗಾರಿಕೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಮರಳು ಸಾಗಿಸುವ ವಾಹನವನ್ನು ತಡೆಯೊಡ್ಡಿದ ಘಟನೆ ಶುಕ್ರವಾರ ಸಾಯಂಕಾಲ ನಡೆದಿದೆ.
ಇಲ್ಲಿನ ಶಾಂಭವಿ ನದಿಯಿಂದ ಮರಳು ಒಯ್ಯತ್ತಿದ್ದ ಟೆಂಪೋ ಒಂದನ್ನು ತಡೆದು ನಿಲ್ಲಿಸಿದ ಸ್ಥಳೀಯರು, ನಮ್ಮೂರ ರಸ್ತೆ, ಪರಿಸರ ಹಾಳಾಗುತ್ತದೆ ಎಂದು ಆಗ್ರಹಿಸಿ ತಕ್ಷಣ ನಿಲ್ಲಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಮರಳುಗಾರಿಕೆ ನಡೆಸುತ್ತಿದ್ದಾತನ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಬಗ್ಗೆ ಈಗಾಗಲೇ ಮುಂಡ್ಕೂರು ಗ್ರಾಮ ಪಂಚಾಯತ್ಗೂ ಲಿಖಿತ ದೂರು ನೀಡಲಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿ ಮರಳುಗಾರಿಕೆ ನಡೆಸಲು ಬಿಡುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಳಿಕ ಗ್ರಾಮಸ್ಥರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಮರಳು ಸಾಗಾಟಗಾರರಿಗೆ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ.