ಕುಂದಾಪುರ, ಫೆ 25 (DaijiworldNews/MS): ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಯಾನೆ ಕಟ್ಟೆ ಭೋಜಣ್ಣ (79) ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತ ಆರೋಪಿಗಳಲ್ಲಿ ಪೈಕಿ ಓರ್ವರಾದ ಎಚ್. ಇಸ್ಮಾಯಿಲ್ ಅವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
ಗೋಪಾಲಕೃಷ್ಣ ರಾವ್ ಅವರು ಕಳೆದ ವರ್ಷ ಮೇ 25ರಂದು ಕೋಟೇಶ್ವರ ಸಮೀಪ ಪುರಾಣಿಕ ರಸ್ತೆಯ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆ ಸಿಟ್ಔಟ್ನಲ್ಲಿ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಡೆತ್ನೋಟ್ನಲ್ಲಿ ಹೆಸರಿದ್ದ ಗಣೇಶ್ ಶೆಟ್ಟಿಯನ್ನು ಈ ಮೊದಲೇ ಬಂಧಿಸಲಾಗಿದ್ದು, ಪ್ರಕರಣದಲ್ಲಿ ಇನ್ನೊಂದು ಹೆಸರಿದ್ದ ಬ್ರೋಕರ್ ಎಚ್. ಇಸ್ಮಾಯಿಲ್ ನಿರೀಕ್ಷಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಡೆತ್ನೋಟ್ನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಬ್ರೋಕರ್ ಇಸ್ಮಾಯಿಲ್ ಸೇರಿ ನನಗೆ ಬಡ್ಡಿಯ ಆಮಿಷ ತೋರಿಸಿ 3 ಕೋಟಿ 34 ಲಕ್ಷ ರೂ. ನಗದು ಮತ್ತು 5ಕೆಜಿ 24 ಕ್ಯಾರೆಟ್ ಚಿನ್ನವನ್ನು ಕೆಲ 2013ರ ಫೆ. 31ರಂದು ಪಡೆದುಕೊಂಡಿದ್ದಾರೆ. ಆದರೆ ಇಲ್ಲಿ ತನಕ ಅಸಲು ಮತ್ತು ಬಡ್ಡಿಯನ್ನು ನೀಡಿಲ್ಲಎಂದು ಗೋಪಾಲಕೃಷ್ಣ ರಾವ್ ಉಲ್ಲೇಖಿಸಿದ್ದರು.
ಹೈಕೋರ್ಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಆರೋಪಿ ಇಲ್ಲಿನ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಅನಂತರ ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರು ಆರೋಪಿ ಪರ ಜಾಮೀನಿಗೆ ಅರ್ಜಿ ಹಾಕಿದಾಗ ನ್ಯಾಯಾಧೀಶ ಧನೇಶ ಮುಗಳಿ ಅವರು ಉಚ್ಚ ನ್ಯಾಯಾಲಯದ ಆದೇಶದಂತೆ ಕ್ರಮಬದ್ಧ ಜಾಮೀನು ಮಂಜೂರು ಮಾಡಿದರು.