ಮಂಗಳೂರು, ಫೆ. 24 (DaijiworldNews/SM), ನೇರಳಕಟ್ಟೆ ಸಮೀಪದ ಏಮಾಜೆ ಎಂಬಲ್ಲಿ ಒಂದೇ ದಿನ 6 ದನಗಳನ್ನು ಕಳವು ಮಾಡಲಾಗಿದ್ದು, ದನಗಳ ಮಾಲಕರ ಮನೆಗಳಿಗೆ ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿದರು.
ದನಗಳನ್ನು ಕಳವು ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಸ್ಥಳಕ್ಕೆ ಬಂದಿದ್ದ ವಿಟ್ಲ ವೃತ್ತ ನಿರೀಕ್ಷಕ ಎಚ್ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೆಟ್ಲಮುಡ್ನೂರು ಗ್ರಾಮದ ಏಮಾಜೆ ಪರಿಸರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಐದಾರು ಮನೆಗಳಿಂದ ಒಂದೇ ದಿನ 6 ದನಗಳು ಕಳವಾಗಿರುವ ಬಗ್ಗೆ ವಿಟ್ಲ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.
ದಾಮೋದರ ಏಮಾಜೆ, ಹೊನ್ನಮ್ಮ, ಪೂವಪ್ಪ ಅವರ ಮನೆಯ ದನಗಳನ್ನು ಒಂದೇ ದಿನ ಕಳವು ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ದನವನ್ನು ಸಾಕಿ ಅದರಿಂದ ಬರುವ ಅದಾಯಿಂದ ಜೀವನ ಸಾಗಿಸುವ ಬಡ ಕುಟುಂಬಗಳ ದನಗಳನ್ನು ಕಳವು ಮಾಡಿದ ಘಟನೆಯ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದಂತೆ ಹೆಚ್ಚಿನ ಕ್ರಮಕ್ಕೆ ಪೋಲೀಸ್ ಇಲಾಖೆಗೆ ಸೂಚಿಸಿದ್ದಾರೆ.
ಪ್ರಸ್ತುತ ಕಳವು ಮಾಡಿದ ದನ ಕಳ್ಳರನ್ನು ಶೀಘ್ರವಾಗಿ ಬಂಧಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ತನಿಯಪ್ಪ ಗೌಡ, ಆಶೋಕ್ ರೈ, ರಾಧಕೃಷ್ಣ ಅಡ್ಯಂತಾಯ, ಸುರೇಶ್ ಭಟ್ ಇಡ್ಕಿದು, ನರಸಿಂಹ ಮಾಣಿ, ಜಗದೀಶ್ , ನೀಲಯ್ಯ ಮತ್ತಿತರರು ಉಪಸ್ಥಿತರಿದ್ದರು