ಕುಂದಾಪುರ, ಫೆ 24 (DaijiworldNews/DB): ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಸರ್ಕಲ್ನ ಅವೈಜ್ಞಾನಿಕ ನಿರ್ಮಾಣದಿಂದ ಅಪಘಾತ ವಲಯವಾಗಿ ಪರಿಣಮಿಸಿದೆ. ತೆಕ್ಕಟ್ಟೆ ಜಂಕ್ಷನ್ನಲ್ಲಿ ನಿತ್ಯವೂ ಅಪಘಾತ ಸಾಮಾನ್ಯವಾಗಿದ್ದು, ಅನೇಕ ಪ್ರಾಣಹಾನಿ ಸಂಭವಿಸಿದೆ.
ಹಲವರು ತಮ್ಮದ್ದಲ್ಲದ ತಪ್ಪಿಗೆ ಗಾಯಾಳುಗಳಾಗಿ ಆಸ್ಪತ್ರೆ ವಾಸ ಅನುಭವಿಸಿದ್ದಾರೆ. ಅಂಗಾಂಗಗಳ ಸ್ವಾಧೀನ ಕಳೆದುಕೊಂಡಿದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಆಸ್ಪತ್ರೆಗೆ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ, ಹೆದ್ದಾರಿಯನ್ನು ಗುತ್ತಿಗೆ ಪಡೆದಿರುವ ನವಯುಗ ಸಂಸ್ಥೆಗೆ ನಿತ್ಯವೂ ಸಾರ್ವಜನಿಕ ವಲಯದಿಂದ ಹಿಡಿಶಾಪ ಕೇಳಿ ಬರುತ್ತಿದೆ.
ಯಾವಾಗ ಚತುಷ್ಪಥ ಹೆದ್ದಾರಿ ನಿರ್ಮಾಣವಾಯಿತೋ ಅಲ್ಲಿಂದ ತೆಕ್ಕಟ್ಟೆಯಲ್ಲಿ ರಸ್ತೆ ಅಪಘಾತದ ಸರಣಿಯೇ ಆರಂಭವಾಯಿತು. ಹೆದ್ದಾರಿ ನಿರ್ಮಾಣ ಮಾಡುವಾಗ ಸ್ಥಳೀಯವಾಗಿ ಸಮರ್ಪಕವಾಗಿ ಅಧ್ಯಯನ ಮಾಡದೇ ಇರುವುದು ಇವತ್ತು ತೆಕ್ಕಟ್ಟೆ ಸುತ್ತಮುತ್ತ ಜನ ಅನುಭವಿಸುವಂತಾಗಿದೆ. ಗೊತ್ತುಗುರಿ ಇಲ್ಲದ ಇಂಜಿನಿಯರ್ಗಳ ತೀರ್ಮಾನ ಈಗ ಪಾಶ್ಚಾತ್ತಾಪ ಪಡುವಂತಾಗಿದೆ.
ಕತ್ತಲಲ್ಲಿಯೇ ಇದೆ ತೆಕ್ಕಟ್ಟೆ ಸರ್ಕಲ್
ತೆಕ್ಕಟ್ಟೆ ವೃತ್ತವನ್ನು ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಸಂಸ್ಥೆ ಯಾವ ರೀತಿಯಲ್ಲಿ ಕಡೆಗಣಿಸಿದೆ ಎಂದರೆ ಇಷ್ಟೊಂದು ಅಪಘಾತಗಳು ನಿತ್ಯ ಸಂಭವಿಸುತ್ತಿದ್ದರೂ ಸರ್ಕಲ್ನಲ್ಲಿ ಒಂದು ಹೈಮಾಸ್ಕ್ ಲೈಟ್ ಅಳವಡಿಸುವ ಬಗ್ಗೆ ಸಂಬಂಧಪಟ್ಟವರಿಗೆ ಯೋಚನೆಯೇ ಇಲ್ಲ. ಇದರಿಂದ ಈ ಸರ್ಕರ್ಲ ಕತ್ತಲಲ್ಲಿಯೇ ಇದೆ. ಸಾರ್ವಜನಿಕರು ಇಲ್ಲಿ ಹೈಮಾಸ್ಟ್ ಲೈಟ್ ಅಳವಡಿಸುವಂತೆ ಬೇಡಿಕೆ ಇಟ್ಟರೂ ಕೂಡಾ ಸಂಬಂಧಪಟ್ಟವರು ಕ್ಯಾರೆ ಎನ್ನುತ್ತಿಲ್ಲ. ಕತ್ತಲಿನಿಂದಾಗಿ ಹಲವು ಅನಾಹುತಗಳು ಸಂಭವಿಸುತ್ತಿವೆ.
ತೆಕ್ಕಟ್ಟೆಯನ್ನು ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಸಂಸ್ಥೆ ಗ್ರಾಮಾಂತರ ಪ್ರದೇಶ ಎಂದು ಸರ್ವೀಸ್ ರಸ್ತೆಗಳ ನಿರ್ಮಾಣ ಮಾಡಲಿಲ್ಲ. ಸರ್ವೀಸ್ ರಸ್ತೆ ಮಾಡಿಕೊಡಿ ಎನ್ನುವ ಕೂಗಿನ ಉತ್ತರವಿಲ್ಲ. ಸರ್ವೀಸ್ ರಸ್ತೆ ಇಲ್ಲದೇ ಇರುವುದರಿಂದ ವಾಹನಗಳ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಅಪಘಾತಗಳಿಗೆ ಕಾರಣವಾಗುತ್ತಿದೆ.
ತೆಕ್ಕಟ್ಟೆ ಸರ್ಕಲ್ ಹತ್ತಿರದಲ್ಲಿ ಸರ್ಕಾರಿ ಶಾಲೆಯಿದೆ. ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಯಾವುದೇ ಭಾಗದಲ್ಲಿಯೂ ಕೂಡಾ ಝೀಬ್ರಾ ಕ್ರಾಸಿಂಗ್ ಅಳವಡಿಕೆ ಮಾಡಿಲ್ಲ. ಮಕ್ಕಳ ಗ್ರಾಮ ಸಭೆಯ ನಿರ್ಣಯಗಳನ್ನು ಗಾಳಿಗೆ ತೂರಲಾಗಿದೆ. ತೆಕ್ಕಟ್ಟೆ ಸರ್ಕಲ್ನಲ್ಲಿ ಸಂಭವಿಸುವ ಅನಾಹುತಗಳ ಬಗ್ಗೆಯೂ ಕೂಡಾ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರೂ ಕೂಡಾ ಸರ್ಕಲ್ನಲ್ಲಿ ಸುರಕ್ಷತೆಯ ಬಗ್ಗೆ ಒತ್ತು ಕೊಡುವ ಕೆಲಸವಂತೂ ಆಗುತ್ತಿಲ್ಲ. ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ.
ಹೈಮಾಸ್ಟ್ ಲೈಟ್ ಅಳವಡಿಸಿ
ತೆಕ್ಕಟ್ಟೆ ಸರ್ಕಲ್ನಲ್ಲಿ ತಕ್ಷಣ ಹೈಮಾಸ್ಟ್ ಲೈಟ್ ಅಳವಡಿಕೆ ಮಾಡಬೇಕು. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ನಿತ್ಯವೂ ಅಪಘಾತ ಸಂಭವಿಸುತ್ತಿದೆ. ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ ಕಂಪೆನಿ, ಉಡುಪಿ ಜಿಲ್ಲಾಡಳಿತ ಇನ್ನೂ ಮೌನ ವಹಿಸಿದರೆ ತೆಕ್ಕಟ್ಟೆಯ ಸಾರ್ವಜನಿಕರು ಸುಮ್ಮನಿರುವುದಿಲ್ಲ. ತೆಕ್ಕಟ್ಟೆಯ ದಲಿತ ಸಂಘಟನೆ ನೇತೃತ್ವದಲ್ಲಿ ಸ್ಥಳೀಯ ವಿವಿಧ ಸಂಘಟನೆಗಳು, ಸಾರ್ವಜನಿಕರು ಮೇಣದ ಬತ್ತಿ ಬೆಳಗಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುವುದರ ಜೊತೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತದೆ
-ಸತೀಶ ಕುಮಾರ್, ಸ್ಥಳೀಯರು