ಕಾಸರಗೋಡು, ಫೆ 24 (DaijiworldNews/HR): ಮಂಜೇಶ್ವರ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಕ್ರಬೈಲು - ಕಡೆಮಜಲು - ಕಲ್ಲರಕಟ್ಟೆ - ಮಲಾರು - ಕರ್ಪಿಕಾರ್ ಸಂಪರ್ಕಿಸುವ ರಸ್ತೆ ತೀರ ಹದಗೆಟ್ಟಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ವ್ಯಂಗ್ಯವಾಗಿ ಬ್ಯಾನರ್ ಹಾಕಿದ್ದಾರೆ.
ಕಡೆಮಜಲಿನಲ್ಲಿ ರಸ್ತೆ ಬದಿಯಲ್ಲಿ ಜನಪ್ರತಿನಿಧಿಗಳ ವಿರುದ್ಧವಾಗಿ ವ್ಯಂಗ್ಯವಾಗಿ ಬ್ಯಾನರ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಈ ರಸ್ತೆಯಾಗಿ 40 ವರ್ಷಗಳಿಗಿಂತಲೂ ಹೆಚ್ಚು ವರ್ಷವಾದರೂ ಇನ್ನೂ ಕೂಡ ಸಂಪೂರ್ಣ ರಸ್ತೆಗೆ ಡಾಮರೀಕರಣವಾಗಿಲ್ಲ. ಅರ್ಧ ರಸ್ತೆಗೆ ಡಾಮರೀಕರಣ ಹಲವು ವರ್ಷಗಳ ಹಿಂದೆ ಆಗಿದ್ದರೂ ಅದು ಈಗ ಸಂಪೂರ್ಣ ಎದ್ದು ವಾಹನ ಸವಾರರ ಓಡಾಟಕ್ಕೆ ಕಷ್ಟಕರವಾಗಿದೆ,. ಪ್ರತಿದಿನವೂ ಈ ಬಾಗದಲ್ಲಿ ವಾಹನ ಸವಾರರು ಈ ಹೊಂಡ ಗುಂಡಿಯ ರಸ್ತೆಯಲ್ಲಿ, ಅರ್ದಬಂರ್ದ ಎದ್ದಿರುವ ಜಲ್ಲಿಕಲ್ಲುಗಳಿಂದಾಗಿ ಎದ್ದು ಬಿದ್ದು ಸಂಚರಿಸುವ ಪರಿಸ್ಥಿತಿಯಾಗಿದೆ.
ಇನ್ನು ಈ ಭಾಗದಲ್ಲಿ ಹಲವು ಮನೆಗಳಿದ್ದರೂ ಕೂಡ ರಸ್ತೆ ವ್ಯವಸ್ಥೆ ಇಲ್ಲದೆ ಜನ ಪರದಡುವಂತಾಗಿದೆ. ಆಟೋ ರಿಕ್ಷಾಗಳು ಈ ಭಾಗದಲ್ಲಿ ಸಂಚರಿಸಲಿ ಹಿಂದೇಟು ಹಾಕುವುದ್ದರಿಂದ ಜನರು ವಸ್ತುಗಳನ್ನು ಹೊತ್ತುಕೊಂಡೇ ಸಾಗಬೇಕಾದ ಪರಿಸ್ಥಿತಿ ಇದೆ. ಹಲವು ವಿದ್ಯಾರ್ಥಿಗಳು ಈ ಭಾಗದಿಂದ ಶಾಲೆಗೆ ತೆರಳುತ್ತಿದ್ದಾರೆ. ಆದರೆ ಬಸ್ ಮತ್ತು ಇತರ ವಾಹನ ಈ ರಸ್ತೆಯಲ್ಲಿ ಸಂಚರಿಸದ ಕಾರಣ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಈ ರಸ್ತೆಯ ಮೂಲಕ ಬಾಕ್ರಬೈಲು ಮಲಾರು ಬ್ರಹ್ಮಸ್ಥಾನದ ಹಾಗೂ ಇನ್ನಿತರ ದೈವಸ್ಥಾನಗಳು ಹಾಗೂ ಮಸೀದಿಗಳು, ಧಾರ್ಮಿಕ ಕೇಂದ್ರಗಳಿದ್ದರೂ ರಸ್ತೆ ದುರಸ್ತಿ ಮಾಡುವಲ್ಲಿ ಜನಪ್ರತಿನಿಧಿಗಳು ಉದಾಸೀನತೆ ತೋರಿದ್ದಾರೆ.
ಈ ರಸ್ತೆಯಿರುವ ವಾರ್ಡ್ ನಿಂದ ನಿಂತ ಅಭ್ಯರ್ಥಿ ಕಳೆದ ಅವಧಿ ಮತ್ತು ಈ ಅವಧಿಯಲ್ಲೂ ಪಂಚಾಯತ್ ಅಧ್ಯಕ್ಷರಾದರೂ ರಸ್ತೆಗೆ ಅನುದಾನ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಈ ರಸ್ತೆಗಿಂತ ನಂತರ ನಿರ್ಮಾಣವಾದ ಈ ಭಾಗದ ಹಲವು ರಸ್ತೆಗೆ ಡಾಮರೀಕರಣವಾದರೂ ಈ ರಸ್ತೆಯನ್ನು ಮಾತ್ರ ಅಭಿವೃದ್ದಿ ಪಡಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.