ಉಡುಪಿ, ಫೆ 24 (DaijiworldNews/DB): ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಬೆಳ್ಳಂಪಳ್ಳಿ ಗ್ರಾಮದ ಗೋಪಾಲ ಕಾಮತ್ ಅವರ ಪುತ್ರ ಜಯರಾಮ್ ಕಾಮತ್ (46) ನಾಪತ್ತೆಯಾದವರು. ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಜಯರಾಮ್ ಅವರನ್ನು ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 16ರಂದು ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಜಯರಾಮ್ ಅವರೊಂದಿಗೆ ಅವರ ಸಹೋದರ ಶ್ರೀಪತಿ ಕಾಮತ್ ಹಗಲು ಹೊತ್ತಿನಲ್ಲಿ ಆರೈಕೆಯಲ್ಲಿದ್ದರು. ಫೆಬ್ರವರಿ 21ರಂದು ಮಧ್ಯಾಹ್ನ 3.30ಕ್ಕೆ ಶ್ರೀಪತಿ ಕಾಮತ್ ಅವರು ಮನೆಗೆ ತೆರಳಿದ್ದರು. ಮರುದಿನ ಮತ್ತೆ ಆಸ್ಪತ್ರೆಗೆ ಹೋದಾಗ ಅಲ್ಲಿ ಜಯರಾಮ್ ಕಾಮತ್ ಇರಲಿಲ್ಲ.
ಇದರಿಂದ ಆತಂಕಿತರಾದ ಶ್ರೀಪತಿ ಕಾಮತ್ ವಿವಿಧೆಡೆ ಹುಡುಕಾಡಿದ್ದಾರೆ. ಇತ್ತ ಜಯರಾಮ್ ಕಾಮತ್ ಅವರು ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.