ಉಡುಪಿ, ಫೆ 24 (DaijiworldNews/HR): ಉಡುಪಿಯಲ್ಲಿ ಪ್ರಥಮ ಬಾರಿಗೆ ಉಪ್ಪೂರಿನ ಮಡಿಸಾಲು ನದಿಯಲ್ಲಿ ಆಯೋಜಿಸಿರುವ 11ನೇ ರಾಷ್ಟ್ರೀಯ ಮಟ್ಟದ "ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್" ಗೆ ಫೆಬ್ರವರಿ 23 ರಂದು ಮಾಹೆ ಪ್ರೊ ಚಾನ್ಸಲರ್ ಡಾಕ್ಟರ್ ಎಚ್.ಎಸ್. ಬಲ್ಲಾಳ್ ಚಾಲನೆಯನ್ನು ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲೆ ಮತ್ತು ಭಾರತೀಯ ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್, ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದೊಂದಿಗೆ ಈ "ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್" ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾಕ್ಟರ್ ಎಚ್. ಎಸ್ ಬಲ್ಲಾಳ್ ಅವರು "ಕರಾವಳಿ ಕರ್ನಾಟಕದಲ್ಲಿ ಜಲ ಕ್ರೀಡೆಗಳಿಗೆ ವಿಫುಲ ಅವಕಾಶವಿದ್ದು, ಮಾತ್ರವಲ್ಲದೇ ಸ್ಥಳೀಯ ಯುವಕರ ದೇಹರ್ದ್ಯಾಡ ಕೂಡಾ ಜಲಕ್ರೀಡೆಗಳಿಗೆ ಪೂರಕವಾಗಿ ಇದೆ. ಉತ್ತಮ ತರಬೇತಿ ಲಭಿಸಿದರೆ ಇಲ್ಲಿನ ಸ್ಥಳೀಯ ಯುವಜನರು ರಾಷ್ಟ್ರ ಮತ್ತು ಅಂತರಾಷ್ಟ್ರೀ ಮಟ್ಟದಲ್ಲಿ ಮಿಂಚುವಲ್ಲಿ ಸಂದೇಹವೇ ಇಲ್ಲ" ಎಂದರು.
ಈ ಸಂದರ್ಭದಲ್ಲಿ ಭಾರತೀಯ ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರಶಾಂತ್ ಕುಶ್ವಾಹಾ, ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ಮೇಜರ್ ಜನರಲ್ ಎಂ.ಎನ್ ದೇವಯ್ಯ, ಕಾರ್ಯದರ್ಶಿಗಳಾದ ದಿಲೀಪ್ ಕುಮಾರ್, ಭಾರತೀಯ ಡ್ರ್ಯಾಗನ್ ಬೋಟ್ ತಂಡದ ನಾಯಕರಾದ ಮಂಜೀತ್ ಸಿಂಗ್, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ, ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಡ್ರ್ಯಾಗನ್ ಬೋಟ್ ಪಂದ್ಯಾವಳಿಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಿರ್ತಿ ರಾಜೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಎಚ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಹಾಕೆ ಅಕ್ಷಯ್ ಮಚ್ಚಿಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೋಷನ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.