ಮಂಗಳೂರು,ಮಾ.16(AZM):ಕೇಂದ್ರ ಸರಕಾರ ನಡೆಸಿದೆ ಎನ್ನಲಾದ ರಫೇಲ್ ಹಗರಣದ ಮಾಹಿತಿ ಕೈಪಿಡಿ ಪುಸ್ತಕವನ್ನು ಇಂದು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕಾಂಗ್ರೆಸ್ ನ ಶಿಸ್ತು ಸಮಿತಿ ಅಧ್ಯಕ್ಷ ವಿ.ಆರ್.ಸುದರ್ಶನ್ ರವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾರವರು ಮಾತನಾಡಿ, ರಫೇಲ್ ಹಗರಣದಲ್ಲಿ 30 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು 16 ಪುಟಗಳ ಮಾಹಿತಿ ಕೈಪಿಡಿ ಪುಸ್ತಕದ ಐದು ಸಾವಿರ ಪ್ರತಿಗಳನ್ನು ಬಿಡುಗಡೆಗೊಳಿಸಿದ್ದು, ಇದನ್ನು ಮನೆ ಮನೆಗೆ ತಲುಪಿಸುವುದಾಗಿ ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದ ಕುರಿತು ಮಾತನಾಡಿದ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ವಿ.ಆರ್. ಸುದರ್ಶನ್ ರವರು, ಮಾ.19ರಂದು ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ನಡೆಸಲಿದ್ದು, ಆ ಬಳಿಕ ಒಂದೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು. ಈಗಾಗಲೇ ಅಭ್ಯರ್ಥಿಗಳ ಆಯ್ಕೆಯ ಕುರಿತು ಸುಧೀರ್ಘ ಚರ್ಚೆ ನಡೆಸಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ತಿಳಿಸಿದರು.