ಉಡುಪಿ,ಮಾ.16(AZM):ಲಂಚ ಸ್ವೀಕರಿಸಿದ ಆರೋಪದ ಮೇಲೆ ಉಡುಪಿ ಉಪ ಸಾರಿಗೆ ಆಯುಕ್ತ ಹಾಗೂ ಜಿಲ್ಲಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ್ ಹಾಗೂ ಮುನಾಫ್ ಎಂಬವರನ್ನು ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಶನಿವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಆರ್ ಟಿ ಒ ಅಧಿಕಾರಿ ಆರ್.ಎಂ. ವರ್ಣೇಕರ್
ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಉಡುಪಿಯ ವಿಘ್ನೇಶ್ ಎಂಬವರ ಹೊಸ ಕಾರು ಸಂಪೂರ್ಣ ಸುಟ್ಟು ಹೋಗಿದ್ದು, . ಇದಕ್ಕೆ ಪಾವತಿಸಿದ್ದ ತೆರಿಗೆಯಲ್ಲಿ ಸುಮಾರು 65 ಸಾವಿರ ರೂ. ಹಣವನ್ನು ಸರಕಾರ ವಾಪಾಸ್ಸು ಮಾಡಬೇಕಾಗಿತ್ತು. ಆದರೆ ಈ ಹಣವನ್ನು ಬಿಡುಗಡೆ ಮಾಡಬೇಕಾಗಿದ್ದ ಉಡುಪಿ ಆರ್ಟಿಒ ಆರ್.ಎಂ. ವರ್ಣೇಕರ್ 6500 ರೂ. ಲಂಚವನ್ನು ಬೇಡಿಕೆಯಿಟ್ಟಿದ್ದು, ವಿಘ್ನೇಶ್ ಅವರು ಇದಕ್ಕೆ ಒಪ್ಪದೆ, ಮಾ.15ರಂದು ಉಡುಪಿ ಎಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶನಿವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮಣಿಪಾಲದಲ್ಲಿರುವ ಆರ್ಟಿಒ ಕಚೇರಿಗೆ ದಾಳಿ ನಡೆಸಿದ್ದಾರೆ. ಹಾಗೂ, ವಿಘ್ನೇಶ್ ರಿಂದ ಲಂಚ ಸ್ವೀಕರಿಸುತ್ತಿದ್ದ ಆರ್ಟಿಒ ವರ್ಣೇಕರ್ ಹಾಗೂ ಮುನಾಫ್ ಎಂಬವರನ್ನು ಬಂಧಿಸಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಉಡುಪಿ ಎಸಿಬಿ ಡಿವೈಎಸ್ಪಿ ಮಂಜುನಾಥ್, ಪೊಲೀಸ್ ನಿರೀಕ್ಷಕರಾದ ಜಯರಾಮ ಗೌಡ, ಯೋಗೀಶ್, ಸತೀಶ್ ಮೊದಲಾದರು ಭಾಗವಹಿಸಿದ್ದರು.