ಕುಂದಾಪುರ, ಫೆ 23 (DaijiworldNews/MS): ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆ ಬಗ್ಗೆ ವಿಧಾನ ಪರಿಷತ್ನಲ್ಲಿ ಮಂಜುನಾಥ ಭಂಡಾರಿಯವರು ಪ್ರಸ್ತಾಪ ಮಾಡಿ ಸರಕಾರದಿಂದ ಉತ್ತರ ಬಯಸಿದ್ದಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಅವರು ಈ ಬಗ್ಗೆ ನಿರಾಶಾದಾಯಕ ಉತ್ತರ ನೀಡಿ ಕುಂದಾಪ್ರ ಕನ್ನಡ ಅಕಾಡೆಮಿ ಪ್ರಸ್ತಾಪವನ್ನು ತಳ್ಳಿ ಹಾಕಿರುವುದು ಖಂಡನೀಯ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಕುಂದಾಪುರದ ಹೋಟೆಲ್ ಹರಿಪ್ರಸಾದ್ನ ಅಕ್ಷತಾ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ವಿವಿಧ ರೀತಿಯ ಕನ್ನಡ ಮಾತನಾಡುವುದು ಸಾಮಾನ್ಯ ಎಂಬಂತೆ ಉತ್ತರ ನೀಡಿರುವುದು ತಿಳುವಳಿಕೆ ಇಲ್ಲದವರ ಉತ್ತರ ಎಂದೇ ತಿಳಿಯಬೇಕಾಗುತ್ತದೆ. ಧಾರವಾಡ ಕನ್ನಡದ ಮೇಲೆ ಮರಾಠಿ ಪ್ರಭಾವ, ಗುಲ್ಬರ್ಗ ಕನ್ನಡದ ಮೇಲೆ ತೆಲುಗಿನ ಪ್ರಭಾವ, ಕೋಲಾರ ಕನ್ನಡದ ಮೇಲೆ ತಮಿಳು ಪ್ರಭಾವ, ಮಂಗಳೂರು ಕನ್ನಡದ ಮೇಲೆ ಮಲೆಯಾಳ ಪ್ರಭಾವ ಕಾಣಬಹುದು. ಆದರೆ ಕುಂದಾಪುರ ಕನ್ನಡದ ಮೇಲೆ ಯಾವುದೇ ಭಾಷೆಯ ಪ್ರಭಾವ ಬೀರಿಲ್ಲ. ಕುಂದಾಪುರ ಕನ್ನಡ ಈ ಭಾಗದ ಬದುಕು. ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪನೆ ಹಾಗೂ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಂದಾಪುರ ಕನ್ನಡ ಪೀಠಕ್ಕೆ ಅನುದಾನ ಮಂಜೂರಾತಿ ಬಗ್ಗೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುವ ಹೋರಾಟ ಅನಿವಾರ್ಯವಾಗಿದೆ ಎಂದರು.
ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ ಪುತ್ರನ್ ಮಾತನಾಡಿ, ಕುಂದಾಪುರ ಕನ್ನಡವನ್ನು ಸುಮಾರು 30ಲಕ್ಷಕ್ಕೂ ಅಧಿಕ ಮಂದಿ ಕುಂದಾಪುರ ಕನ್ನಡ ಭಾಷೆ ಮಾತನಾಡುತ್ತಾರೆ. ಸಾಕಷ್ಟು ಸಂಶೋಧಕರು ಈ ಭಾಷೆಯ ಆಳದ ಬಗ್ಗೆ ಅಧ್ಯಯನ ಮಾಡಿದರೂ ಇನ್ನೂ ಅದು ಪರಿಪೂರ್ಣವಾಗಿಲ್ಲ. ಕುಂದಾಪ್ರ ಕನ್ನಡ ಅಕಾಡೆಮಿ ಆದರೆ ಸಮಗ್ರ ಅಧ್ಯಯನ ಸಾಧ್ಯವಾಗುತ್ತದೆ. ಈ ಬಗ್ಗೆ ಮಂಜುನಾಥ ಭಂಡಾರಿಯವರು ಅಧ್ಯಯನ ಮಾಡಿ ತನ್ನ ವರದಿಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ ಸಚಿವರು ನೀಡಿದ ಉತ್ತರ ಕುಂದಾಪುರ ಕನ್ನಡ ಭಾಷಿಗರಿಗೆ ಅಚ್ಛರಿಯಾಗಿದೆ. ಸಚಿವರು ತಕ್ಷಣ ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು. ಕುಂದಾಪುರ ಕನ್ನಡ ಭಾಷೆಯ ಸಮಗ್ರ ಅಧ್ಯಯನ, ಸಂಶೋಧನೆಗೆ ಪೂರಕವಾಗುವ ನಿಟ್ಟಿನಲ್ಲಿ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ದಿನಕರ ಶೆಟ್ಟಿ ಮುಂಬಾರು, ಪ್ರಧಾನ ಕಾರ್ಯದರ್ಶಿ ಗಣಪತಿ ಶ್ರೀಯಾನ್,ಪತ್ರಕರ್ತ ಯು.ಎಸ್ ಶೆಣೈ, ಸುಧಾಕರ ಶೆಟ್ಟಿ ಆವರ್ಸೆ, ಆವರ್ಸೆ ರತ್ನಾಕರ ಶೆಟ್ಟಿ, ವೆಂಕಟೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು.