ಕಾರ್ಕಳ, ಫೆ 23 (DaijiworldNews/MS): ಮೂಡಬಿದಿರೆ- ಕಾರ್ಕಳ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ನೆಪದಲ್ಲಿ ಸಾಣೂರು ಪರಿಸರದಲ್ಲಿ ಕುಡಿಯುವ ನೀರಿನ ಪೈಪ್ ಗಳನ್ನು ಕಿತ್ತು ಹಾಕಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಸಾಣೂರು ಗ್ರಾಮ ಪಂಚಾಯತ್ ಸರಹದ್ದಿ ಬೈಪಾಸ್ ನಿಂದ ಮುರತ್ತಂಗಡಿಯ ತನಕ ಅಲ್ಲಲ್ಲಿ ಕುಡಿಯುವ ನೀರಿನ ಪೈಪ್ ಗಳನ್ನು ಕಿತ್ತು ಹಾಕಿರುವ ಪರಿಣಾಮವಾಗಿ ಮನೆಗಳಿಗೆ ಹಾಗೂ ವ್ಯವಹಾರ ಕೇಂದ್ರಗಳಿಗೆ ಕುಡಿಯುವ ನೀರು ಸರಬರಾಜು ಮೊಟಕುಕೊಂಡಿದೆ.
ಈ ಕುರಿತು ಸ್ಥಳೀಯ ನಿವಾಸಿಗಳು ಕಾಮಗಾರಿ ವಹಿಸಿಕೊಂಡಿರುವ ದಿಲೀಪ್ ಸಂಸ್ಥೆಯ ವಾರಿಸ್ತುದಾರರ ಗಮನಕ್ಕೆ ತಂದರೂ ಕ್ಯಾರೇ ಅನ್ನದೇ ಇರುವುದರಿಂದ ಸಮಸ್ಯೆ ಯಥಾಸ್ಥಿತಿಯಲ್ಲಿದೆ.
ಗ್ರಾಮಸ್ಥರ ಪ್ರತಿಭಟನೆ:
ಗುರುವಾರ ಬೆಳಿಗ್ಗೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಮೂಲ ಸೌಕರ್ಯ ಕಸಿದುಕೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕಾಮಗಾರಿಗೆ ಅವಕಾಶ ನೀಡಲಾರೆವು. ಕಿತ್ತು ಹಾಕಿದ ಕುಡಿಯುವ ನೀರಿನ ಪೈಪ್ ಗಳನ್ನು ಮರು ಜೋಡಣೆಯ ಬಳಿಕ ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಅಗಮಿಸಿದ ಮುಖಂಡರುಗಳು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆದಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉದಯ ಕೋಟ್ಯಾನ್, ಸಾಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಸಾಣೂರು ನರಸಿಂಹ ಕಾಮತ್, ಕರುಣಾಕರ ಕೋಟ್ಯಾನ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಪೂಜಾರಿ ಸಹಿತ ಇತರರು ಉಪಸ್ಥಿತರಿದ್ದರು.ನಗರ ಠಾಣಾಧಿಕಾರಿ ಪ್ರಸನ್ನ ಘಟನಾ ಸ್ಥಳಕ್ಕೆ ಆಗಮಿಸಿದರು