ಸುಬ್ರಹ್ಮಣ್ಯ, ಫೆ 23 (DaijiworldNews/DB): ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ಕಡಬ ತಾಲೂಕಿನ ವಿವಿಧೆಡೆ ಗುರುವಾರವೂ ಮುಂದಯವರಿದಿದೆ. ಸುಳ್ಯ ತಾಲೂಕಿನಲ್ಲಿ ಕಾಣಿಸಿಕೊಂಡ ಕಾಡಾನೆಯೊಂದು ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಪ್ರಸಂಗ ನಡೆದಿದೆ.
ಮಂಗಳವಾರ ರಾತ್ರಿ ಐತೂರು ಭಾಗದ ತೋಟವೊಂದರಲ್ಲಿ ಆನೆ ಕೃಷಿ ನಾಶ ಮಾಡಿದ ಮಾಹಿತಿಯಂತೆ ಅಲ್ಲಿಗೆ ತಂಡವೊಂದು ತೆರಳಿತ್ತು. ಅಲ್ಲಿನ ರಬ್ಬರ್ ತೋಟವೊಂದರಲ್ಲಿ ಆನೆ ಪತ್ತೆಯಾಯಿತು.ಬುಧವಾರ ಬೆಳಗ್ಗೆ ರೆಂಜಿಲಾಡಿಯಲ್ಲಿದ್ದ ಸಾಕಾನೆಗಳನ್ನು ತಂದು ಕಾರ್ಯಾಚರಣೆ ನಡೆಸಲಾಯಿತು. ಸಂಜೆ ಕಾಡಾನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಲು ಯತ್ನಿಸಲಾಯಿತಾದರೂ ಒಂಟಿ ಸಲಗ ತಪ್ಪಿಸಿಕೊಂಡಿದೆ. ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಎರಡು ಆನೆಗಳು ಇರುವುದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.
ಇನ್ನು ಕಾರ್ಯಾಚರಣೆ ಗುರುವಾರವೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಡಾನೆ ದಾಳಿಯಿಂದಾಗಿ ಕಡಬದ ರೆಂಜಿಲಾಡಿಯಲ್ಲಿ ಸೋಮವಾರ ಯುವತಿ ಸಹಿತ ಇಬ್ಬರು ಬಲಿಯಾಗಿದ್ದರು. ಆನೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ನೋಡುವ ಕುತೂಹಲದಿಂದ ಸ್ಥಳದಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಇನ್ನು ಸಕಲೇಶಪುರ ಅಥವಾ ಶಿವಮೊಗ್ಗದಲ್ಲಿ ಸಾಕಾನೆಗಳನ್ನು ಬಳಸಿ ಕಾಡಾನೆ ಹಿಡಿಯುಚ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಕಡಬದಲ್ಲಿ ಆನೆ ಸೆರೆ ಹಿಡಿದಿರುವ ವೀಡಿಯೋ ಎಂಬಂತೆ ಬಿಂಬಿಸಿದ ಪ್ರಸಂಗವೂ ನಡೆದಿದೆ.