ಕುಂದಾಪುರ,ಮಾ 16 (MSP): ಅಪ್ರಾಪ್ತ ಅನಾಥ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ ಎನ್ನುವ ಗಂಭೀರ ಆರೋಪದ ಮೇಲೆ ಕುಂದಾಪುರದ ಕೆದೂರಿನಲ್ಲಿರುವ ಸ್ಪೂರ್ತಿಧಾಮದ ಸ್ವಯಂಘೋಷಿತ ಕಾರ್ಯದರ್ಶಿ ಕೇಶವ ಕೋಟೇಶ್ವರನನ್ನು ಹಾಗೂ ಅತ್ಯಾಚಾರ ನಡೆಸಿದ್ದಾನೆನ್ನಲಾದ ಇನ್ನೋರ್ವ ಆರೋಪಿ ನೂಜಿ ನಿವಾಸಿ ಹನುಮಂತ ಎಂಬಾತನನ್ನು ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಗುರುವಾರ ತಡರಾತ್ರಿಯೇ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರ ಆದೇಶದಂತೆ ಆರೋಪಿ ಕೇಶವ ಹಾಗೂ ಇನ್ನೋರ್ವ ಅತ್ಯಾಚಾರಿ ಆರೋಪಿ ಹನುಮಂತನನ್ನು ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿದೆ.
ಮಕ್ಕಳ ಸ್ಥಳಾಂತರ: ಪ್ರಕರಣದಲ್ಲಿ ಸಂತ್ರಸ್ಥರಾಗಿರುವ ಆರು ಮಕ್ಕಳನ್ನು ಬುಧವಾರವೇ ನಿಟ್ಟೂರಿನ ಬಾಲಮಂದಿರಕ್ಕೆ ಸ್ಥಳಾಂತರಿಸಿದ್ದು, ಸ್ಪೂರ್ತಿಧಾಮದಲ್ಲಿ ನಡೆಯುತ್ತಿದ್ದ ಅನೈತಿಕ ಅತ್ಯಾಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಡಳಿತ ಸ್ಪೂರ್ತಿಧಾಮದಲ್ಲಿದ್ದ ಸುಮಾರು 22 ಜನ ಮಕ್ಕಳನ್ನು ಸ್ಥಳಾಂತರಿಸಲು ಆದೇಶಿಸಿತ್ತು. ಶುಕ್ರವಾರ ಸಂಜೆ ಉಡುಪಿಯ ನಿಟ್ಟೂರಿನಲ್ಲಿರುವ ಬಾಲಮಂದಿರಕ್ಕೆ ವರ್ಗಾಯಿಸಲಾಗಿದೆ.
ಅನಾಥರಾದ ವೃದ್ಧರು: ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುವಂತೆ ಆರೋಪಿ ಕೇಶವ ಕೋಟೇಶ್ವರನ ಬಂಧನದಿಂದಾಗಿ ಮತ್ತು ಸಿಬ್ಬಂದಿಗಳು ಇಲ್ಲದೇ ಇರುವುದರಿಂದಾಗಿ ಆಶ್ರಮದಲ್ಲಿದ್ದ ವೃದ್ಧರು ಅನಾಥರಾಗಿದ್ದಾರೆ. ಊಟಕ್ಕೂ ಸಮಸ್ಯೆ ಎದುರಾಗಿದ್ದು, ಸ್ನಾನ ಮಾಡಿಸಿ ಆರೈಕೆ ಮಾಡಿಕೊಳ್ಳಲು ಸಾಧ್ಯವಿಲ್ಲವಾಗಿದೆ. ಕೆಲವು ತಿಂಗಳುಗಳಿಂದ ಇಲ್ಲಿನ ವೃದ್ಧರು ಶುಚಿತ್ವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೇ ವೃದ್ಧಾಶ್ರಮದ ಫಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಲ್ಲಿರುವ ವೃದ್ಧರನ್ನೂ ಸ್ಥಳಾಂತರಿಸಿ ಸ್ಪೂರ್ತಿಧಾಮಕ್ಕೆ ಬೀಗ ಜಡಿದು ಜಿಲ್ಲಾಡಳಿತ ವಶಕ್ಕೆ ಪಡೆಯಬೇಕು ಎಂದೂ ಸ್ಥಳೀಯರು ಆಗ್ರಹಿಸಿದ್ದಾರೆ.