ಸುಬ್ರಹ್ಮಣ್ಯ, ಫೆ 22 (DaijiworldNews/DB): ಕಾಡಾನೆ ದಾಳಿಗೆ ಯುವತಿ ಸೇರಿದಂತೆ ಇಬ್ಬರು ಮೃತಪಟ್ಟ ಬೆನ್ನಲ್ಲೇ ಕಡಬ ತಾಲೂಕಿನಲ್ಲಿ ಸಾಕಾನೆಗಳನ್ನು ಬಳಸಿಕೊಂಡು ಕಾಡಾನೆಗಳ ಸೆರೆಗೆ ವಿಶೇಷ ಕಾರ್ಯಾಚರಣೆ ನಡೆಯುತ್ತಿದ್ದು, ಇಂದೂ ಮುಂದುವರಿದಿದೆ. ಈಗಾಗಲೇ ಮೂರು ಆನೆಗಳ ಇರುವಿಕೆ ಪತ್ತೆಯಾಗಿದೆ.
ಮೀನಾಡಿ ನೈಲಾದಲ್ಲಿ ಕಾಡಾನೆ ದಾಳಿಯಿಂದಾಗಿ ಯುವತಿ ಹಾಗೂ ವ್ಯಕ್ತಿಯೋರ್ವರು ಸಾವನ್ನಪ್ಪಿದರು. ಈ ಘಟನೆ ಬೆನ್ನಲ್ಲೇ ಆನೆಗಳ ಪತ್ತೆಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ವತಿಯಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕಾಡಾನೆಗಳ ಸೆರೆಗಾಗಿ ದುಬಾರೆ ಮತ್ತು ತಿತಿಮತಿಯಿಂದ ಐದು ಸಾಕಾನೆಗಳು ಬಂದಿದ್ದು, ಸಿಬಂದಿ, ಪಶು ವೈದ್ಯರು ಕೂಡಾ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ರೆಂಜಿಲಾಡಿ, ನೂಜಿಬಾಳ್ತಿಲ ಪ್ರದೇಶದಲ್ಲಿ ನಿನ್ನೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಮೀನಾಡಿ ಬಳಿಯ ನೈಲ, ರೆಂಜಿಲಾಡಿಯ ಕೊಣಾಜೆ ಅರಣ್ಯ ಪ್ರದೇಶದ ಬಾಂತಾಜೆ ಬಳಿ, ನೂಜಿಬಾಳ್ತಿಲ ಗ್ರಾಮದ ನಿಡ್ಡೋ, ಪುತ್ತಿಗೆ ಮುಂತಾದೆಡೆ ನಡೆದ ಶೋಧ ಕಾರ್ಯ ವೇಳೆ ಆನೆಗಳ ಇರುವಿಕೆಯ ಜಾಡು ಪತ್ತೆಯಾಗಿದೆ. ಇನ್ನು ಪುತ್ತಿಗೆ ಭಾಗದಲ್ಲಿ ಕಾಡಾನೆ ಇರುವ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ಸಾಕಾನೆ ಕೊಂಡೊಯ್ಯಲಾಗಿದ್ದರೂ, ಸಂಜೆಯಾದ ಕಾರಣ ನಿನ್ನೆ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಹೀಗಾಗಿ ಇಂದು ಮತ್ತೆ ಸಾಕಾನೆ ನೆರವಿನಿಂದ ಕಾಡಾನೆ ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಆನೆಗಳ ಪತ್ತೆಗಾಗಿ ಎನ್ಐಟಿಕೆ ಹಾಗೂ ಅರಣ್ಯ ಇಲಾಖೆಗಳ ಡ್ರೋನ್ ಕೂಡಾ ಬಳಸಲಾಗುತ್ತಿದೆ.
ಮೈಸೂರು, ಮಡಿಕೇರಿ, ಬಿಆರ್ಟಿಯ ಐವರು ವೈದ್ಯರನ್ನೊಳಗೊಂಡ ಮೂರು ತಂಡಗಳನ್ನು ರಚಿಸಿ ಕಾಡಾನೆಗಳ ಪತ್ತೆಗೆ ಮುಂದಾಗಿದೆ.
ಆನೆಗಳ ಜಾಡು ಪತ್ತೆಯಾದ ಬಳಿಕ ಸಾಕಾನೆಗಳನ್ನು ಅಲ್ಲಿಗೆ ಕೊಂಡೊಯ್ಯಲಾಗುತ್ತದೆ. ಆ ಮೂಲಕ ಅವುಗಳನ್ನು ಸೆರೆ ಹಿಡಿಯುವುದು ಉದ್ದೇಶ. ಇನ್ನು ಸಾಕಾನೆಗಳನ್ನು ಬಳಸಿಕೊಂಡು ಕಾಡಾನೆಗಳನ್ನು ಸೆರೆ ಹಿಡಿಯುವ ಪ್ರಯತ್ನ ದ.ಕ. ಜಿಲ್ಲೆಯಲ್ಲಿ ಇದೇ ಮೊದಲನೇ ಬಾರಿಯಾಗಿದೆ. ಆದರೆ ಕೊಡಗು, ಹಾಸನಗಳಲ್ಲಿ ಸಾಮಾನ್ಯವಾಗಿ ಈ ಪ್ರಯೋಗಗಳು ಆಗಾಗ ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಕಾಡಾನೆಗಳನ್ನು ಸೆರೆ ಹಿಡಿದೇ ಇಲ್ಲಿಂದ ತೆರಳಲಾಗುವುದು ಎಂದು ಮಂಗಳೂಡು ಡಿಎಫ್ಓ ವೈ.ಕೆ. ದಿನೇಶ್ಕುಮಾರ್ ಹೇಳಿದ್ದಾರೆ. ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ವೀಕ್ಷಣೆಗೆ ಹಲವು ಜನರು ಆಗಮಿಸಿ ಕುತೂಹಲದಿಂದ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.