ಉಪ್ಪಿನಂಗಡಿ, ಫೆ 21 (DaijiworldNews/DB): ಆಶ್ರಮಕ್ಕೆ ಹಣ, ಹಳೆ ಬಟ್ಟೆ ಸಂಗ್ರಹಿಸುತ್ತಿದ್ದೇವೆಂದು ನಕಲಿ ಐಡಿ ಕಾರ್ಡ್ ತೋರಿಸಿ ತಂಡವೊಂದು ಭಿಕ್ಷಾಟನೆ ನಡೆಸುತ್ತಿರುವ ಘಟನೆ ಉಪ್ಪಿನಂಗಡಿಯಲ್ಲಿ ಸಕ್ರಿಯವಾಗಿದೆ. ಈ ತಂಡ ಕೊಯ್ಲದ ಮನೆಯೊಂದಕ್ಕೆ ತೆರಳಿದ ವೇಳೆ ಅವರ ವಂಚನೆ ಬಯಲಾಗಿದೆ.
ಕೊಯ್ಲದ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಅವರ ಮನೆಗೆ ಇಬ್ಬರು ಹೆಂಗಸರು ಸೋಮವಾರ ಬಂದಿದ್ದು, ಮೈಸೂರಿನ ಇಲವಾಲದ ಬಳಿಯ ಅಂಗವಿಕಲ ಮತ್ತು ವೃದ್ದಾಶ್ರಮಕ್ಕೆ ಬಟ್ಟೆ, ಬರೆ, ಹಣಕಾಸಿನ ನೆರವು ನೀಡುತ್ತಿದ್ದೇವೆ. ಅದಕ್ಕಾಗಿ ನಮಗೆ ನಿಮ್ಮ ಸಹಕಾರ ಅಗತ್ಯ ಎಂದಿದ್ದರು. ಈ ವೇಳೆ ಆ ಹೆಂಗಸರಲ್ಲಿ ಪ್ರದೀಪ್ ಅವರು ಐಡಿ ಕಾರ್ಡ್ ತೋರಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಅವರು ಸರಿಯಾದ ಪ್ರತಿಕ್ರಿಯೆ ನೀಡದೇ, ಆಶ್ರಮದ ಅಧ್ಯಕ್ಷರು ನೆರವು ನೀಡುವಂತೆ ಮನವಿ ಮಾಡಿರುವ ಪತ್ರವೊಂದನ್ನು ನೀಡಿದ್ದಾರೆ.
ಆದರೆ ಆ ನಂಬರ್ಗೆ ಕರೆ ಮಾಡಿದಾಗ ಆಶ್ರಮದ ಅಧ್ಯಕ್ಷ ಎಸ್.ಕೆ. ರಮೇಶ್ ಅವರು ಕರೆ ಸ್ವೀಕರಿಸಿ ನಾವು ಯಾವುದೇ ನೆರವನ್ನು ಯಾಚಿಸಿಲ್ಲ. ನಮ್ಮ ಸಂಸ್ಥೆಯಿಂದ ಹಣಕಾಸು, ಬಟ್ಟೆ ಬರೆ ನೆರವಿಗಾಗಿ ಯಾರನ್ನೂ ಕಳುಹಿಸಿಲ್ಲ ಎಂದಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರೂ ಅಲ್ಲಿಂದ ಪರಾರಿಯಾಗಿದ್ದಾರೆ.
ಉಪ್ಪಿನಂಗಡಿ ಹಳೆಗೇಟು ಬಳಿ ನೇತ್ರಾವತಿ ನದಿ ಬಳಿ ಈ ತಂಡ ವಾಸಿಸುತ್ತಿದ್ದಾರೆ. ಅಲ್ಲದೆ ಹಳೆ ಬಟ್ಟೆ ಬರೆ ಪಡೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಸಂತೆಗೆ ಕೊಂಡೊಯ್ದು ಹೊಸ ಬಟ್ಟೆ ಎಂಬುದಾಗಿ ಮಾರಾಟ ಮಾಡುತ್ತಾ ಜನರಿಗೆ ವಂಚನೆ ಎಸಗುತ್ತಿದ್ದಾರೆ ಎಂದು ಪ್ರದೀಪ್ ಆಪಾದಿಸಿದ್ದಾರೆ.