ಕಾರ್ಕಳ,ಮಾ 16 (MSP): ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಯು ಪಾರದರ್ಶಕವಾಗಿ, ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಸಂತೋಷ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಶನಿವಾರದಂದು ಸಾರ್ವತ್ರಿಕ ಲೋಕಸಭಾ ಚುನಾವಣೆಯ 2019 ಕ್ಕೆ ಸಂಬಂಧಿಸಿದಂತೆ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿಧಾನಸಭಾ ಕ್ಷೇತ್ರ, ಕಾರ್ಕಳ-122 ರಲ್ಲಿ 96694 ಮಹಿಳಾ ಮತದಾರರು, 87106-ಪುರುಷ ಮತದಾರರು ಹಾಗೂ 2771-ಯುವ ಮತದಾರರು ಸೇರಿ ಒಟ್ಟು 184571 ಮಂದಿ ಮತದಾರರಿದ್ದಾರೆ. ತಾಲೂಕಿನ 209 ಮತಗಟ್ಟೆಗಳಲ್ಲಿ 140 ಸಾಮಾನ್ಯ ಮತಗಟ್ಟೆಗಳು, 21-ಸೂಕ್ಷ್ಮ ಮತಗಟ್ಟೆಗಳು ಹಾಗೂ 48-ನಕ್ಸಲೈಟ್ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿರುತ್ತದೆ. ಚುನಾವಣೆಯನ್ನು ಸುಗಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಮತದಾರರ ಗುರುತಿನ ಚೀಟಿ ಹಾಗೂ ಮತಗಟ್ಟೆ ಅಧಿಕಾರಿಯಾಗಿ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಒಟ್ಟು 209 ಮತಗಟ್ಟೆ ಅಧಿಕಾರಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದರು.
ಮತದಾನ ಸುಸೂತ್ರವಾಗಿ ನಡೆಯಲು ಹಾಗೂ ಮತಗಟ್ಟೆಗಳಲ್ಲಿ ಕನಿಷ್ಟ ಸೌಲಭ್ಯಗಳಾದ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸುಮಾರು 18 ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ, ಮತದಾನ ಪ್ರಕ್ರಿಯೆ ಸುಲಲಿತವಾಗಿ ನಡೆಯಲು 23 ಸೆಕ್ಟರ್ ಆಫೀಸರುಗಳು, ೩ ಫ್ಲೈಯಿಂಗ್ ಸ್ಕ್ವಾಡ್, 3 ಅಂಕಿ ಅಂಶ ನಿಗಾ ತಂಡ, 3 ವೀಡಿಯೋ ನಿಗಾ ತಂಡ, 3 ವೀಡಿಯೋ ವಿಚಕ್ಷಣಾ ತಂಡ, 2 ಮಾಸ್ಟರ್ ಟ್ರೈನರ್, 1-ಸುವಿಧಾ ತಂಡ, 1-ಸಿವಿಜಿಲ್ ತಂಡ ಹಾಗೂ ಕಛೇರಿಯಲ್ಲಿ ಏಕ-ಗವಾಕ್ಷಿ ನಿಯಂತ್ರಣಾ ಕೊಠಡಿ ವ್ಯವಸ್ಥೆ, ಮಾಡಲಾಗಿರುತ್ತದೆ.
ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಸೋಮೇಶ್ವರ, ಸಾಣೂರು, ಮಾಳ, ಈದು-ಹೊಸ್ಮಾರು ಸೇರಿದಂತೆ 4 ಕಡೆ ವಾಹನ ತಪಾಸಣಾ ಕೇಂದ್ರವನ್ನು ಸ್ಥಾಪಿಸಲಾಗಿರುತ್ತದೆ. ಸದ್ರಿ ತಪಾಸಣಾ ಕೇಂದ್ರಗಳಲ್ಲಿ 3 ಪಾಳಯಗಳಲ್ಲಿ 9 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ನಿಗದಿಪಡಿಸಿದ ಸಮಯದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿವೆ. ಚುನಾವಣೆಯ ನೀತಿ-ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು 24 ಗಂಟೆ ಕಾರ್ಯ ನಿರ್ವಹಣೆಗಾಗಿ 2 ತಂಡಗಳನ್ನು ರಚಿಸಲಾಗಿದ್ದು, ತಾಲೂಕು ಕಛೇರಿಯ ಕಂಟ್ರೋಲ್ ರೂಂ ದೂರವಾಣಿ ಸಂ. 08258-230201 ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದಾಗಿದೆ ಅವರು ಇದೇ ಸಂದರ್ಭದಲ್ಲಿ ಕರೆ ತಿಳಿಸಿದರು. ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ತಾಲೂಕು ಮಟ್ಟದ ನೀತಿ-ಸಂಹಿತೆ ಅಧಿಕಾರಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹನಾಧಿಕಾರಿ ಮೇಜರ್ ಹರ್ಷ ಕೆ. ಬಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಮೇಜರ್ ಹರ್ಷ ಅವರ ದೂರವಾಣಿ ಸಂ. 9480878100 ಗೆ ಸಂಪರ್ಕಿಸಿ ಮಾಹಿತಿಯನ್ನು ನೀಡಬಹುದಾಗಿದೆ.
ಧಾರ್ಮಿಕ ಆಚರಣೆಯ ಆತಂಕ ಅಗತ್ಯ ಇಲ್ಲ
ನೀತಿ-ಸಂಹಿತೆ ಜಾರಿಯಲ್ಲಿದ್ದರೂ ಸಹಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ಅಡ್ಡಿ-ಆತಂಕ ಇರುವುದಿಲ್ಲ. ಧಾರ್ಮಿಕ ಕೇಂದ್ರಗಳ ವಠಾರದ ಒಳಗೆ ಬ್ಯಾನರ್, ಬಂಟಿಂಗ್ಸ್ ಕಟ್ಟಲು ಅವಕಾಶ ಇದ್ದು, ಆದರೆ ಯಾವುದೇ ರಾಜಕೀಯ ವ್ಯಕ್ತಿಗಳು ಶುಭ ಕೋರುವ ಬ್ಯಾನರ್ ಗಳನ್ನು ಅಳವಡಿಸಲು ಅವಕಾಶವೇ ಇಲ್ಲ. ಸಾರ್ವಜನಿಕ ಸ್ಥಳ ಮತ್ತು ರಸ್ತೆ ಬದಿಗಳಲ್ಲಿ ಯಾವುದೇ ಬ್ಯಾನರ್, ಬಂಟಿಂಗ್ಸ್ ಗಳನ್ನು ಕಟ್ಟುವಂತಿಲ್ಲ. ಸಾರ್ವಜನಿಕರು ನಡೆಸುವ ಧಾರ್ಮಿಕ ಹಾಗೂ ಕೌಟುಂಬಿಕ ಕಾರ್ಯಕ್ರಮಗಳ ಬಗ್ಗೆ ಸಹಾಯಕ ಚುನಾವಣಾ ಅಧಿಕಾರಿಯವರ ಕಛೇರಿಯಲ್ಲಿ ತೆರೆಯಲಾಗಿರುವ ಏಕ-ಗವಾಕ್ಷಿ ನಿಯಂತ್ರಣಾ ವ್ಯವಸ್ಥೆಯ ಮೂಲಕ ಪೂರ್ವಾನುಮತಿಯನ್ನು ಪಡೆದು, ಕಾರ್ಯಕ್ರಮವನ್ನು ನಡೆಸುವುದು.
ರಾಜಕೀಯ ಪಕ್ಷದವರು ನಡೆಸುವ ಪ್ರಚಾರ ಕಾರ್ಯಕ್ರಮ, ಶೋಭಾ ಯಾತ್ರೆ, ಮುಂತಾದವುಗಳಿಗೆ ಸುವಿಧಾ ತಂತ್ರಾಂಶದಲ್ಲಿ ಪಕ್ಷದ ಅಭ್ಯರ್ಥಿ/ ಕಾರ್ಯಕರ್ತರು ತಾವಾಗಿಯೇ ಅರ್ಜಿಯನ್ನು ಆನ್-ಲೈನ್ ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಂಬಂಧಪಟ್ಟ ಪೋಲೀಸ್ ಇಲಾಖೆ, ಪುರಸಭೆ ಗ್ರಾಮ ಪಂಚಾಯತ್ ಗಳಿಂದ ನಿರಾಕ್ಷೇಪಣಾ ಪತ್ರ/ ಅನುಮತಿ ಪತ್ರವನ್ನು ಪಡೆದು ಪರಿಶೀಲಿಸಿ, ಏಕ-ಗವಾಕ್ಷಿ ಸಮಿತಿ, ನೋಡಲ್ ಅಧಿಕಾರಿಯವರಿಂದ ಅನುಮೋದನೆಗೊಂಡ ಮೇಲೆ ಸಹಾಯಕ ಚುನಾವಣಾ ಅಧಿಕಾರಿಯವರಿಂದ ಅನುಮತಿಯನ್ನು ನೀಡಲಾಗುವುದು. ಒಂದು ವೇಳೆ ಪೂರ್ವಾನುಮತಿ ಇಲ್ಲದೇ ನಡೆಸುವ ಯಾವುದೇ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ, ಸದ್ರಿಯವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಮಹೇಶ್ಚಂದ್ರ, ತಾಲೂಕು ಪಂಚಾಯತ್ ಲೆಕ್ಕಶಾಖೆಯ ಮುಖ್ಯಸ್ಥ ನಿತಿನ್, ಚುನಾವಣಾ ಗಾವಕ್ಷಿಯ ಮೇಲುಸ್ತುವಾರಿ ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಮುಕ್ತವಾಗಿ ರಾಷ್ಟ್ರೀಯ ಹಬ್ಬ ಆಚರಿಸೋಣ
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಸದೇ, ದೇಶದ ಅಭಿವೃದ್ಧಿಗೆ ಪೂರಕವಾಗಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಲೋಕಸಭಾ ಚುನಾವಣೆಯನ್ನು ಭಾರತೀಯ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸೋಣ ಅದಕ್ಕೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸೋಣ ಎಂದು ಇದೇ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಜಿ.ಸಂತೋಷ್ ಕೋರಿದ್ದಾರೆ.