ಕಾಸರಗೋಡು, ಫೆ 21 (DaijiworldNews/DB): ವಿಚ್ಚೇದನ ಎಲ್ಲಾ ಧರ್ಮಗಳಲ್ಲಿಯೂ ಇದೆ. ಹಾಗಂದ ಮೇಲೆ ಮುಸ್ಲಿಮರಲ್ಲಿರುವ ತ್ರಿವಳಿ ತಲಾಖ್ ವ್ಯವಸ್ಥೆಯನ್ನು ಅಪರಾಧೀಕರಣ ಮಾಡಿರುವುದೇಕೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ.
ಕಾಸರಗೋಡಿನಲ್ಲಿ ಆಡಳಿತ ಪಕ್ಷ ಸಿಪಿಎಂನ 'ಜನಕೀಯ ಪ್ರತಿರೋಧ ಜಾಥಾ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಧರ್ಮಗಳಲ್ಲಿಯೂ ದಂಪತಿಗಳ ನಡುವೆ ವಿಚ್ಚೇದನ ನಡೆಯುತ್ತದೆ. ಅವುಗಳನ್ನು ನ್ಯಾಯಾಲಯದಲ್ಲಿ ಸಿವಿಲ್ ವಿಷಯವಾಗಿ ತೆಗೆದುಕೊಳ್ಳಲಾಗುತ್ತದೆ. ಆದರೆ ಮುಸ್ಲಿಮರಲ್ಲಿರುವ ತ್ರಿವಳಿ ತಲಾಕ್ ವ್ಯವಸ್ಥೆಯನ್ನು ಮಾತ್ರ ಕಾನೂನು ಮುಖಾಂತರ ದೇಶದಲ್ಲಿ ಅಪರಾಧೀಕರಣ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕ್, ಅಫ್ಘಾನ್, ಬಾಂಗ್ಲಾ ಸಹಿತ ವಿವಿಧ ದೇಶಗಳ ಅಲ್ಪಸಂಖ್ಯಾತ ಹಿಂದು, ಸಿಖ್, ಕ್ರೈಸ್ತ, ಜೈನ, ಪಾರ್ಸಿ ಸಮುದಾಯಗಳಿಗೆ ಪೌರತ್ವ ನೀಡಲು ಸುಲಭವಾಗುವಂತೆ ಕೇಂದ್ರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿದೆ. ಆದರೆ ಕೇರಳದಲ್ಲಿ ಈ ತಿದ್ದುಪಡಿ ಕಾಯ್ದೆ ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳುವುದಿಲ್ಲ ಎಂದರು.