ಕಾಸರಗೋಡು, ಮಾ 16 (MSP): ಬರಗಾಲದ ಮುನ್ಸೂಚನೆಯ ನೆಪವೊಡ್ಡಿ ಹೊಳೆಗಳಿಂದ ಕೃಷಿಗೆ ನೀರು ಬಳಸಲು ಕಾಸರಗೋಡು ಜಿಲ್ಲಾಡಳಿತ ನಿಯಂತ್ರಣ ಹೇರಿದ್ದು , ಇದು ಕೃಷಿಕರಿಗೆ ಮರ್ಮಾಘಾತ ನೀಡಿದೆ. ಜಿಲ್ಲಾಡಳಿತದ ಕ್ರಮದ ವಿರುದ್ಧ ರೈತರು ಮಾ.16ರ ಶನಿವಾರದಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿಗಾಗಿ ಹೊಳೆ ನೀರನ್ನು ನಂಬಿರುವ ಮಂಜೇಶ್ವರ , ಕುಂಬಳೆ ಪ್ರದೇಶ ವ್ಯಾಪ್ತಿಯ ಕೃಷಿಕರು ಈಗ ಅತಂತ್ರಕ್ಕೆ ಸಿಲುಕಿದ್ದಾರೆ. ಸುಡು ಬಿಸಿಲು, ಬೇಸಿಗೆಯಿಂದ ಕೃಷಿ ಒಣಗಿಹೋಗುವಂತಹ ಸ್ಥಿತಿಗೆ ತಲಪಿದೆ. ಮತ್ತೊಂದೆಡೆ ನೀರಿನ ಲಭ್ಯತೆ ಕುಸಿಯುತ್ತಾ ಇದೆ. ಹೊಳೆಬದಿಯ ಕೃಷಿಕರು ಹೊಳೆ ನೀರನ್ನು ಅವಲಂಭಿಸಿ ಕೃಷಿ ನಡೆಸುತ್ತಿದ್ದಾರೆ.
ಆದರೆ ಈ ಬಾರಿ ಬೇಸಿಗೆ ತೀವ್ರತೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ನೀರಿನ ದುರುಪಯೋಗ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ತೆಗದುಕೊಂಡಿದೆ. ಇದರಂತೆ ಹೊಳೆಗಳಿಂದ ಕುಡಿಯುವ ನೀರಿಗೆ ಹೊರತು ಕೃಷಿ ಹಾಗೂ ಇತರ ಅಗತ್ಯಗಳಿಗಾಗಿ ಬಳಸದಂತೆ ಹೊಳೆಯಿಂದ ನೀರೆತ್ತುವ ಮೋಟಾರು ಪಂಪ್ ಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಇದರಿಂದ ಪೈವಳಿಕೆ ಮತ್ತು ಮೀ೦ಜ ವ್ಯಾಪ್ತಿಯಲ್ಲಿ ಹೊಳೆ ಬದಿಗಳಲ್ಲಿ ಅಳವಡಿಸಲಾಗಿದ್ದ ಮೋಟಾರು ಪಂಪ್ ಗಳ ವಿದ್ಯುತ್ ಸಂಪರ್ಕವನ್ನು ಯಾವುದೆ ಮುನ್ಸೂಚನೆ ಇಲ್ಲದೆ ಅಧಿಕಾರಿಗಳು ವಿಚ್ಛೇದಿಸಿದ್ದು , ಇದರಿಂದ ಕೃಷಿಕರು ಅತಂತ್ರಕ್ಕೆ ಸಿಲುಕಿದ್ದಾರೆ .
ಹಲವು ದಶಕಗಳಿಂದ ಪರಿಸರವಾಸಿಗಳು ಕೃಷಿಕರು ಹೊಳೆ ನೀರನ್ನೇ ಬಳಸಿ ಕೃಷಿ ನಡೆಸುತ್ತಿದ್ದು , ಅಡಿಕೆ , ತೆಂಗು ಹಾಗೂ ಇತರ ಕೃಷಿಗೆ ಹೊಳೆ ನೀರೇ ಆಶ್ರಯವಾಗಿದೆ. ಆದರೆ ಇದೀಗ ಹೊಳೆ ಗಳಿಂದ ನೀರು ಪಂಪ್ ಮೂಲಕ ಮೇಲೆತ್ತುವುದರ ವಿರುದ್ಧ ನಿರ್ಬಂಧ ಹೇರಿರುವುದರಿಂದ ಬದಲಿ ವ್ಯವಸ್ಥೆ ಏನೆಂಬುದು ಕೃಷಿಕರಲ್ಲಿ ಚಿಂತೆಗೀಡು ಮಾಡಿದೆ .
ಜಿಲ್ಲಾಧಿಕಾರಿಯವರ ಆದೇಶದ ವಿರುದ್ಧ ಪೈವಳಿಕೆ ಮತ್ತು ಮೀ೦ಜ ಪರಿಸರದ ಕೃಷಿಕರು ಪೈವಳಿಕೆ ಕಳಾಯಿ ಹೊಳೆ ಯಲ್ಲಿ ಸಭೆ ಸೇರಿ ಹೋರಾಟದ ರೂಪು ರೇಷೆ ನೀಡಿತು . ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದರು. ವಾಸುದೇವ ನಲ್ಲೂರಾಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.