ಬಂಟ್ವಾಳ, ಫೆ 21 (DaijiworldNews/MS): ಫೇಸ್ಬುಕ್ನಲ್ಲಿ ಬಂದ ಜಾಹೀರಾತಿನ ಮೂಲಕ ಉದ್ಯೋಗಕ್ಕೆ ಸಂಪರ್ಕಿಸಿ ವೀರಕಂಭ ಗ್ರಾಮದ ನಿವಾಸಿಯೊಬ್ಬರು 9.79 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ವೀರಕಂಭ ಗ್ರಾಮದ ನಡಾಲು ರಾಜೇಶ್ ಆಳ್ವ ಎನ್. ವಂಚನೆಗೊಳಗಾದವರು. ಅವರು ಬೆಂಗಳೂರಿನ ಕಂಪೆನಿ ಯೊಂದರಲ್ಲಿ ಉದ್ಯೋಗದಲ್ಲಿದ್ದು, ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಇಲ್ಲಿ ವೇತನ ಕಡಿಮೆಯಾದ ಹಿನ್ನೆಲೆಯಲ್ಲಿ ಫೆ. 18ರಂದು ಫೇಸ್ಬುಕ್ನಲ್ಲಿ ಬಂದ ಜಾಹೀರಾತಿನಲ್ಲಿದ್ದ ವಾಟ್ಸ್ ಆ್ಯಪ್ ನಂಬರನ್ನು ಸಂಪರ್ಕಿಸಿ ಉದ್ಯೋಗ ವಿಚಾರಿಸಿದ್ದರು.
ಬಳಿಕ ಅವರು ಕಳುಹಿಸಿದ ಅಪ್ಲಿಕೇಶನ್ ಮೂಲಕ ಬಯೋ ಡೇಟಾ ಕಳುಹಿಸಿದ್ದು, ಮುಂದೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವೀಸಾ ಪ್ರೊ›ಸೆಸಿಂಗ್ ಚಾರ್ಜ್, ಕಸ್ಟಮ್ ಕ್ಲಿಯರೆನ್ಸ್ ಹಾಗೂ ವಿವಿಧ ಶುಲ್ಕಗಳನ್ನು ಎಟಿಎಂ ಕ್ಯಾಶ್ ಡೆಪಾಸಿಟ್ ಮೆಷಿನ್, ಪೋನ್ ಪೇ, ಪೇಟಿಎಂ ಮೂಲಕ 9.79 ಲಕ್ಷ ರೂ. ಹಣ ಜಮೆ ಮಾಡಿದ್ದಾರೆ. ಈ ರೀತಿ ರಾಜೇಶ್ ಅವರು ವಂಚನೆಗೊಳಗಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಅವರು ನೀಡಿದ ದೂರಿನಂತೆ ದ.ಕ. ಜಿಲ್ಲಾ ಸೆನ್ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.