ಕಾರ್ಕಳ,ಫೆ 21 (DaijiworldNews/MS): ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷ ಗಾನ ಅರ್ಥಧಾರಿ, ಹರಿದಾಸ, ಜಿನದಾಸ, ವಿಡಂಬನಕಾರ, ವಾಗ್ಮಿ, ಚಿಂತನ ಅಂಕಣಕಾರ, ಸದಾಸ್ನೇಹಮಯಿ ಅಪರೂಪದ ವ್ಯಕ್ತಿತ್ವದ ಅಂಬಾತನಯ ಮುದ್ರಾಡಿ(85) ನಿಧನರಾಗಿದ್ದಾರೆ. ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುದ್ರಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂರು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಅಂಬಾತನಯ ಮುದ್ರಾಡಿ ಅವರು 1935ರ ಜೂನ್ 4ರಂದು ಜನಿಸಿದರು. ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಆದರೂ ಅವರ ಲೋಕಜ್ಞಾನ ವಿಶೇಷವಾದುದು. ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರದು.
ಅಂಬಾತನಯ ಮುದ್ರಾಡಿ ಅವರು ಸತತ ಮೂವತ್ತಾರು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ದುಡಿದು 1993ರಲ್ಲಿ ನಿವೃತ್ತಿ ಪಡೆದರು.
ಅಂಬಾತನಯ ಮುದ್ರಾಡಿ ಅವರಿಗೆ ಯಾದವರಾವ್ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ನಿಂಜೂರು ಪ್ರಶಸ್ತಿ, ಮಟ್ಟು ಗೋವರ್ಧನ ರಾವ್ ಪ್ರಶಸ್ತಿ, ಮುಂಬಯಿ ಪದವೀಧರ ಯಕ್ಷಗಾನ ಪ್ರಶಸ್ತಿ, ಪೊಳಲಿ ಶಾಸ್ತ್ರೀ ಪ್ರಶಸ್ತಿ, ಕುಕ್ಕಿಲ ಕೃಷ್ಣಭಟ್ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮ ವಿಠಲ ಪ್ರಶಸ್ತಿ, ಪಲಿಮಾರು ಶ್ರೀಗಳಿಂದ ಸಾಹಿತ್ಯ ಸಿರಿ ಪ್ರಶಸ್ತಿ, ಸಾಹಿತ್ಯ ಕಲಾ ವಾಚಸ್ಪತಿ ಪ್ರಶಸ್ತಿ, ಪತ್ರಿಕಾ ದಿನದ ಗೌರವ, ಅಖಿಲ ಭಾರತ 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಶ್ರೀ ಪ್ರಶಸ್ತಿ, 2019ನೇ ಸಾಲಿನ ಯಕ್ಷಗಾನ ಅಕಾಡಮಿಯ ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿ, 7ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ, ಗೌರವಗಳು ಅವರನ್ನು ಅರಸಿ ಬಂದಿವೆ.