ಉಡುಪಿ, ಫೆ 20 (DaijiworldNews/HR): ಕಾಂಗ್ರೆಸ್ ಅನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳಿಸಬೇಕಾದ ಸ್ಥಿತಿ ಇಂದು ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಉಡುಪಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವರು ಎಲೆಕ್ಷನ್ ಹಿಂದೂಗಳು ಇರುತ್ತಾರೆ. ಅವರಿಗೆ ಅವರ ಕೈಯಲ್ಲಿ ಅಧಿಕಾರ ಇದ್ದಾಗ ಅವರಿಗೆ ಕುಂಕುಮ ಕಂಡರೆ ಹೆದರಿಕೆ ಆಗುತ್ತದೆ. ಕುಂಕುಮ ಇಟ್ಟವನು ಯಾವುದೇ ಬಾಂಬ್ ಹಾಕಿಲ್ಲ. ಆತ ಕೂಗಿದ್ದು ಕೇವಲ ಭಾರತ್ ಮಾತಾಕಿ ಜೈ ಎಂದು ಮಾತ್ರ. ಆದರೂ ಅವರಿಗೆ ಹೆದರಿಕೆ. ಕೇಸರಿ ಬರೀ ಬಾವುಟದಲ್ಲಿ ಇಲ್ಲ, ನಮ್ಮ ಹೃದಯದಲ್ಲಿ ಇದೆ ಕೇಸರಿ. ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರ ಹೇಳುತ್ತಾರೆ, ನಾನೂ ಹಿಂದೂ ಆದರೆ ಹಿಂದುತ್ವವಾದಿ ಅಲ್ಲ ಎಂದು. ಹಿಂದು ಎಂದರೆ ದೇಹ, ಹಿಂದುತ್ವ ಎಂದರೆ ಜೀವ, ದೇಹದ ಒಳಗೆ ಜೀವ ಇದ್ದರೆ ಮಾತ್ರ ದೇಹಕ್ಕ ಬೆಲೆ. ದೇಹ ಇದ್ದು ಜೀವ ಇಲ್ಲದೆ ಇದ್ದರೆ ಹೆಣಕ್ಕೆ ಸಮ. ಅ ಹೆಣವನ್ನು ಯಾರೂ ಬಹಳ ಹೊತ್ತು ಮನೆಯಲ್ಲಿ ಇಡುವುದಿಲ್ಲ. ಹಾಗೆಯೇ ಜೀವ ಇಲ್ಲದೆ ಇರುವ ಕಾಂಗ್ರೆಸ್ ಪಾರ್ಟಿಯನ್ನು ಕೂಡಾ ಬಹಳ ಹೊತ್ತು ಊರಿನಲ್ಲಿ ಇಟ್ಟುಕೊಳ್ಳುಬಾರದು. ರಾಜಕೀಯವಾಗಿ ಅದಕ್ಕೊಂದು ಸಂಸ್ಖಾರ ಕೊಡಬೇಕು. ಜೀವ ಹೋದ ನಂತರ ಅದಕ್ಕೊಂದು ಪೂಜಾ ಕರ್ಮಗಳನ್ನು ಮಾಡಿ ಅದು ಯಾವತ್ತೂ ಪೀಡೆಯಾಗಿ, ಪಿಶಾಚಿಯಾಗಿ ಕಾಡದೇ ಇರಲಿ ಎಂದು ಸಂಸ್ಕಾರ ಕೊಟ್ಟು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ನಮ್ಮ ಪದ್ದತಿ ಪ್ರಕಾರ ಹೂಳೂವುದೋ. ಸುಡುವುದೋ ಮಾಡಬೇಕು. ನಾವು ಚೆಂಡು ಹೂವು ಇಡುವುದಿಲ್ಲ ಎಂದು ಮಾಡಿದ್ದೆವು ಆದರೆ ಚೆಂಡು ಹೂವನ್ನು ಅವರೇ ಇಟ್ಟುಕೊಂಡಿದ್ದಾರೆ ಇನ್ನೇನಿದ್ದರೂ ಸ್ಮಶಾನಕ್ಕೆ ಕಳಿಸುವುದು ಮಾತ್ರ ಕೆಲಸ,. ನೀವು ಯಾರೂ ಹೂವು ತರಬೇಕಾಗಿಲ್ಲ. ಸಾಧ್ಯವಾದರೆ ಎರಡು ಊದುಬತ್ತಿ ತೆಗೆದುಕೊಂಡು ಬನ್ನಿ ದೂಪ ಹಾಕಿ ಸ್ಮಶಾನದ ಕಡೆಗೆ ಕಳಿಸಿಬಿಡಿ. ಪಿಂಡ ಹಾಕುವ ತೊಂದರೆಗೆ ಹೋಗುವುದು ಬೇಡ ಏಕೆಂದರೆ ದಂಡ ಪಿಂಡ ಗಳಿಗಾಗುವಷ್ಟು ಅವರು ತಿಂದು ಬಿಟ್ಟಿದ್ದಾರೆ. ಆಕಾಶ, ಭೂಮಿ, ಪಾತಾಳ ಮೂರರಲ್ಲೂ ಹಗರಣ ಮಾಡಿದ್ದಾರೆ. ಹಾಗೆ ಸ್ಮಶಾನದ ಕಡೆಗೆ ಕಳಿಸಬೇಕು ಎಂದಾದರೆ ನಮ್ಮ ಬೂತ್ ನ ಒಂದೇ ಒಂದು ವೋಟ್ ಕೂಡಾ ಕಾಂಗ್ರೆಸ್ ಗೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ಅಯೊಧ್ಯೆಯಲ್ಲಿ ಕಳಂಕಿತ ಕಟ್ಟಡದ ನಾಶವಾಗಿ ಮತ್ತೆ ರಾಮ ಮಂದಿರ ಪುನರುತ್ಥಾನ ಆಗಬೇಕು ಎನ್ನುವುದು 500 ವರ್ಷಗಳ ಹೋರಾಟ. ಈ ಹೋರಾಟಕ್ಕೆ ಶಕ್ತಿ ತುಂಬಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದು ಅದು ನಮ್ಮ ನಿಯತ್ತು. ಧರ್ಮ ಬಿಜೆಪಿ ಕಡೆ ಇವತ್ತಿಗೂ ಇದೆ. ಈಗಲೂ ಕೂಡಾ ರಾಮ ಕೃಷ್ಣ, ಶಿವರಾದಿಯಾಗಿ ದೇವಾನುದೇವತೆಗಳು ಇರುವುದು ಕೇವಲ ಬಿಜೆಪಿ ಪರ. ಇಲ್ಲಿನ ಪಂಜುರ್ಲಿ, ಗುಳಿಗ ಸೇರಿದಂತೆ ಎಲ್ಲಾ ದೇವಾನು ದೇವತೆಗಳು ಇರುವುದು ಬಿಜೆಪಿ ಪರವೇ ಎಂದು ಸಿಟಿ ರವಿ ಉಡುಪಿಯಲ್ಲಿ ಹೇಳಿದ್ದಾರೆ