Karavali
ಗಂಗೊಳ್ಳಿ: 'ಬಿಜೆಪಿಯಲ್ಲಿ ಉಡುಪಿಗೆ ವಿಶೇಷ ಸ್ಥಾನವಿದೆ' - ಜೆ.ಪಿ ನಡ್ಡಾ
- Mon, Feb 20 2023 07:13:26 PM
-
ಗಂಗೊಳ್ಳಿ, ಫೆ 20 (DaijiworldNews/HR): ಸಮಾವೇಶದಲ್ಲಿ ಸೇರಿರುವ ಜನಸ್ತೋಮದಿಂದ ಚುನಾವಣೆಯ ಬಗ್ಗೆ ಜನರ ಅಭಿಪ್ರಾಯ ಏನು ಎಂದು ಇದರಿಂದ ತಿಳಿಯುತ್ತದೆ. ಉಡುಪಿಗೆ ಬಿಜೆಪಿಯಲ್ಲಿ ವಿಶೇಷ ಸ್ಥಾನವಿದೆ. ಈಗ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೆ ಈ ದೇಶದಲ್ಲಿ ಮೊದಲ ಬಾರಿ ಬಿಜೆಪಿ ಬಾವುಟ ಹಾರಿದ್ದು ಉಡುಪಿಯಲ್ಲಿ. ಉಡುಪಿ ಪುರಸಭೆಯಲ್ಲಿ ಮೊದಲ ಬಾರಿ ಅಧಿಕಾರ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಉಡುಪಿಯು ಗೇಟ್ ವೇ ಫಾರ್ ಬಿಜೆಪಿ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಮುಳ್ಳಿಕಟ್ಟೆಯ ನಗುಸಿಟಿ ಮೈದಾನದಲ್ಲಿ ಸೋಮವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ನಮ್ಮ ದೇಶ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ವೇಳೆ ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಿದೆ ನಾವು ಅವರ ಜೊತೆಗಿದ್ದೇವೆ ಅನ್ನೋದು ಹೆಮ್ಮೆ. 2047 ಬಂದಾಗ ನಮ್ಮ ದೇಶ ಜಗತ್ತಿನ ಶಿಖರದಲ್ಲಿರುತ್ತದೆ. ಇದಕ್ಕೆ ಭಾರತೀಯರೆಲ್ಲರೂ ದೊಡ್ಡ ಕೊಡುಗೆ ನೀಡಲಿದ್ದೀರಿ. ಇದೇ ಕಾರಣಕ್ಕೆ ನಾವೆಲ್ಲ ಸೌಭಾಗ್ಯವಂತರು ಎಂದು ಹೇಳಿದ ಅವರು ಕಾಂಗ್ರೆಸ್ ಕಾರಣಕ್ಕೆ ನಾವು ವಿಚಲಿತರಾಗುವುದು ಬೇಡ. ಬಿಜೆಪಿ ಈ ಭಾಗದಲ್ಲಿ ಮಾಡಿದ ಕೆಲಸವನ್ನು ಜನ ಮರೆಯಲ್ಲ. ಹೇಳಿದ್ದನ್ನು ಮಾಡುವ ತಾಕತ್ತು ಬಿಜೆಪಿಯ ಜನಪ್ರತಿನಿಧಿಗೆ ಮಾತ್ರ ಇದೆ ಎಂದು ಅವರು ಹೇಳಿದರು.
ತುಮಕೂರಿನಲ್ಲಿ ಹೆಲಿಕ್ಯಾಪ್ಟರ್ ಉತ್ಪದನಾ ಘಟಕ ಆರಂಭವಾಗಿದ್ದು, ಇದು ದೇಶದಲ್ಲಿಯೇ ಮಾದರಿಯಾಗಲಿದೆ. ಶೇ 75ರಷ್ಟು ರಕ್ಷಣಾ ವಿಮಾನಗಳು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದ್ದು, ಕರ್ನಾಟಕದಲ್ಲಿ ಕ್ರಾಂತಿಯಾಗಲಿದೆ. ವಿದೇಶ ನೇರ ಹೂಡಿಕೆ ಕರ್ನಾಟಕ ದೇಶದಲ್ಲಿ ನಂ.1 ಸ್ಥಾನದಲ್ಲಿದೆ. ಬಾಹ್ಯಾಕಾಶ ಕ್ಷೇತ್ರದ ಪರಿಕರಗಳಲ್ಲಿ ಶೇ 25 ಉತ್ಪಾದನೆ ಕರ್ನಾಟಕದಲ್ಲಿಯೇ ಆಗುತ್ತಿದೆ. ರೈಲ್ವೆಯ ವಿದ್ಯುದೀಕರಣ ಶೇ 100ರಷ್ಟು ಪೂರ್ಣಗೊಂಡಿದೆ. ಈ ಸಾಧನೆಗಳನ್ನು ಬಿಜೆಪಿ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಮನೆಮನೆಗೆ ತಲುಪಿಸಬೇಕು ಎಂದರು.
ಬರೋಬ್ಬರಿ 200 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟನ್ ದೇಶವನ್ನೂ ಹಿಂದಿಕ್ಕಿ ಭಾರತ ಈಗ ದೇಶದ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಶೇ 100ರಷ್ಟು ಕೊರೋನಾ ವ್ಯಾಕ್ಸಿನ್ ಹಾಕಿದ ವಿಶ್ವದ ಏಕೈಕ ದೇಶ ಭಾರತ. ಕಾಂಗ್ರೆಸ್ನವರು ನಾವು ಪ್ರಯೋಗ ಪಶುಗಳಲ್ಲ ಲಸಿಕೆ ಬೇಡ ಎಂದಿದ್ದರು. ಆದರೆ ಕದ್ದು ಮುಚ್ಚಿ ಹೋಗಿ ಲಸಿಕೆ ಪಡೆದಿದ್ದರು ಎಂದು ವ್ಯಂಗ್ಯವಾಡಿದ ಅವರು, ಉಕ್ರೇನ್ ಮತ್ತು ರಷ್ಯಾಯ ಯುದ್ದದ ಸಂದರ್ಭದಲ್ಲಿ ರಷ್ಯಾದ ಪುಟಿನ್ ಮತ್ತು ಉಕ್ರೇನ್ನ ಝಲೆಸ್ಕಿ ಜೊತೆ ನಿರಂತರ ಮಾತುಕತೆ ಕಡೆಸಿ, ಯುದ್ದಕ್ಕೆ ನಿಲ್ಲಿಸಿ, ಉಕ್ರೇನ್ ನಿಂದ 22,500 ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತಂದ ಏಕೈಕ ದೇಶ ಭಾರತ, ಇದರಲ್ಲಿ 600 ವಿದ್ಯಾರ್ಥಿಗಳು ಕರ್ನಾಟಕದವರಿದ್ದಾರೆ ಎಂದು ಹೇಳಿದ ಅವರು ವಿಶ್ವದ ಬೇರೆ ಯಾವ ದೇಶವೂ ಈ ಸಾಧನೆಗಳನ್ನು ಮಾಡಿಲ್ಲ ಎಂದರು.
ಸಿದ್ದರಾಮಯ್ಯ ಕಾಲದಲ್ಲಿ ವಿದ್ಯುತ್ ಕೊರತೆ ಪವರ್ ಕಟ್ ಸಮಸ್ಯೆ ಇತ್ತು. ಈಗ ಕಾಂಗ್ರೆಸ್ ಪವರ್ ಕಟ್ಟಾಗಿದೆ. ಇನ್ನು ಶಾಶ್ವತವಾಗಿ ಕಾಂಗ್ರೆಸ್ ಪವರ್ ಕಟ್ ಮಾಡಿ ಎಂದು ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ ಅವರು ಭಾರತ ಎನರ್ಜಿ ಕನ್ಸಪಂಶನ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಮರುಬಳಕೆ ಮಾಡಬಹುದಾದ ಇಂಧನ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಕೇವಲ ಶೇಕಡಾ 3 ಇತ್ತು. ಈಗ ಪ್ರಪಂಚದ ಶೇಕಡಾ 40 ಟ್ರಾನ್ಸಾಕ್ಷನ್ ನಮ್ಮ ದೇಶದಲ್ಲಿ ಆಗುತ್ತಿದೆ. ಇದರಿಂದಾಗಿ ಕೇಂದ್ರದ ಸುಮಾರು 300ಕ್ಕೂ ಅಧಿಕ ಯೋಜನೆಗಳ ಫಲಾನುಭವಿಗಳಿಗೆ 25 ಲಕ್ಷ ಕೋಟಿ ರೂಪಾಯಿ ನೇರವಾಗಿ ಮಧ್ಯವರ್ತಿಗಳಿಲ್ಲದೆ ತಲುಪುತ್ತಿದೆ ಎಂದು ಸರಕಾರದ ಸಾಧನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಭಾರತ ವಿಶ್ವದ ಫಾರ್ಮಸಿ ಆಗಿ ಮಾರ್ಪಟ್ಟಿದೆ. 200 ದೇಶಗಳಿಗೆ ಔಷದ ಸರಬರಾಜು ಮಾಡುತ್ತಿದೆ. ಕಾಂಗ್ರೆಸ್ ಆಡಳಿತ ಕಾಲಘಟ್ಟದಲ್ಲಿ ಶೇ.39 ಮನೆಗಳಲ್ಲಿ ಮಾತ್ರ ಶೌಚಾಲಯ ಇತ್ತು, ಈಗ ಶೇ. 98 ಮನೆಗಳಲ್ಲಿ ಶೌಚಾಲಯ ಬಂದಿದೆ. ನಳ್ಳಿ ನೀರು ಶೇಕಡ 58 ರಷ್ಟು ಮನೆಗಳಿಗೆ ತಲುಪಿದೆ ಎಂದು ಹೇಳಿದರು.
ದಲಿತರು ಬುಡಕಟ್ಟು ಜನ ರೈತರು ಪ್ರತಿವರ್ಗಕ್ಕೂ ಯಡಿಯೂರಪ್ಪ ಸರಕಾರ ಬೊಮ್ಮಾಯಿ ಸರಕಾರ ಅನುಕೂಲ ನೀಡಿದೆ. ಕರ್ನಾಟಕದ ಅಭಿವೃದ್ಧಿ ಬಿಜೆಪಿಯಿಂದಲೇ ಆಗಿದೆ. ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ ಎಂದು ಹೇಳಿದ ಅವರು ವಿಭಜನೆ, ಭ್ರಷ್ಟಾಚಾರ ಮಾತು ತಪ್ಪುವುದು, ಒಡೆದು ಆಳುವುದು ಕಾಂಗ್ರೆಸ್ ಪಕ್ಷದ ಮೂಲ ಸ್ವಭಾವ. ಕಾನೂನು ಕೈಗೆತ್ತಿಕೊಳ್ಳುವವವರ, ಸಮಾಜದಲ್ಲಿ ಅಶಾಂತಿ ಮೂಡಿಸುವ ಪಿಎಫ್ಐ ಕಾರ್ಯಕರ್ತರ ಮೇಲಿದ್ದ ಸುಮಾರು 175 ಕೇಸ್ಗಳನ್ನು ಹಿಂಪಡೆದು, ಸುಮಾರು 1600 ಪಿಎಫ್ಐ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದ್ದರು. ಸಮಾಜದಲ್ಲಿ ಅಶಾಂತಿ ಮೂಡಿಸಬೇಕೆಂಬುದು ಮತ್ತು ಸಮಾಜದಲ್ಲಿ ವಿಭಜನೆ ಮಾಡಬೇಕು ಅನ್ನೋದು ಉದ್ದೇಶವಾಗಿತ್ತು ಅಲ್ಲದೆ ಕರ್ನಾಟಕ ದುರ್ಬಲಗೊಳಿಸಲು ಈ ಕೃತ್ಯ ನಡೆಸಿದರು ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಮುಚ್ಚಿದ್ದು ಯಾಕೆ ಎಂದು ಸಿದ್ದರಾಮಯ್ಯ ಉತ್ತರಿಸುವರೆ ಎಂದು ಪ್ರಶ್ನಿಸಿದ ಅವರು, ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಲೋಕಾಯುಕ್ತವನ್ನು ಮುಚ್ಚಿದರು. ಇಂಥವರ ಸರಕಾರ ನಮಗೆ ಬೇಕಾ? ಎಂದು ಹೇಳಿದ ಅವರು ಕೇಂದ್ರ ಸರ್ಕಾರದ ಆಶೀರ್ವಾದ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಕೆಲಸ ಮುಂದುವರೆಯಲು ಮತ್ತೊಮ್ಮೆ ಬಿಜೆಪಿ ಆಡಳಿತಕ್ಕೆ ಬರಬೇಕು ಎಂದು ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬುರುವುದು ನಿಶ್ಚಿತ. ರಾಜ್ಯದಲ್ಲಿ ಅತೀ ಹೆಚ್ಚು ಅನುದಾನ ಬಂದ ಕ್ಷೇತ್ರ ಬೈಂದೂರು ವಿಧಾನಸಭಾ ಕ್ಷೇತ್ರ. ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಸುಕುಮಾರ್ ಶೆಟ್ಟಿ ಜೋಡೆತ್ತುಗಳಂತೆ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ನಿಮ್ಮ ಪಟ್ಟಿಯಲ್ಲಿದ್ದರೆ ಅದನ್ನು ಕೈಬಿಡಿ ಎಂದು ಕಾಂಗ್ರೆಸ್ ಮುಖಂಡರನ್ನು ಛೇಡಿಸಿದ ಅವರು ಭಯೋತ್ಪಾದನೆ ಮತ್ತು ರಾಷ್ಟ್ರೀಯತೆ, ಭಯೋತ್ಪಾದನೆ ಮತ್ತು ರಾಮ ಭಕ್ತರ ನಡುವೆ ಮುಂಬರು ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದರು.
ರಾಮ ಕಾಲ್ಪನಿಕ ವ್ಯಕ್ತಿ, ರಾಮಸೇತು ಸುಳ್ಳು ಎಂದು ನ್ಯಾಯಾಲಕ್ಕೆ ಅಫಿಡವಿತ್ ಸಲ್ಲಿಸಿದ ಕಾಂಗ್ರೆಸ್ನ್ನು ದೇಶದ ಜನ ತಿರಸ್ಕರಿದ್ದಾರೆ. ಇದೀಗ ಉದ್ದ ನಾಮ ಹಾಕಿ ನಾನು ಹಿಂದು ಎಂದು ಹೇಳಿ ತಿರುಗಾಡುತ್ತಿದ್ದಾರೆ. ಇಂತಹ ಸೋಗಲಾಡಿ ರಾಜಕಾರಣ ಮಾಡುವವರು ನಾವಲ್ಲ. ಚುನಾವಣೆಗಾಗಿ ಹಿಂದುತ್ವದ ಪಕ್ಷ ಬಿಜೆಪಿ ಅಲ್ಲ ಎಂದು ಸಿದ್ದರಾಮಯ್ಯರಿಗೆ ಟಾಂಗ್ ಕೊಟ್ಟ ರವಿ, ಕುಂಕುಮ ಇಟ್ಟವನು ಬಾಂಬ್ ಹಾಕಿಲ್ಲ, ಆತ ಕೇವಲ ಭಾರತ್ ಮಾತ ಕೀ ಜೈ ಎಂದನು, ಕೇಸರಿ ನಮ್ಮ ಹೃದಯದಲ್ಲಿದೆ. ಆದರೆ ಮಾಜಿ ಮುಖ್ಯಮಂತ್ರಿಯೊಬ್ಬರು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಹಿಂದು ಆದರೆ ಹಿಂದುತ್ವವಾದಿ ಅಲ್ಲ ಎಂದಿದ್ದಾರೆ. ಹಿಂದು ದೇಹ, ಹಿಂದುತ್ವ ಜೀವ. ದೇಹದೊಳಗೆ ಜೀವ ಇಲ್ಲದೇ ಹೋದರೆ ಅದು ಹೆಣಕ್ಕೆ ಸಮ. ಮನೆಯಲ್ಲಿ ಹೆಣವನ್ನು ಹೆಚ್ಚು ಕಾಲ ಇಟ್ಟುಕೊಳ್ಳುವುದಿಲ್ಲ, ಕಾಂಗ್ರೆಸ್ ಸ್ಮಶಾನದಲ್ಲಿ ಇರಲು ಯೋಗ್ಯವಾದ ಪಾರ್ಟಿ. ಹೀಗಾಗಿ ಜೀವ ಇಲ್ಲದ ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸಿ, ಕಾಂಗ್ರೆಸ್ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಬೈಂದೂರು ಮಾಡಬೇಕು ಎಂದು ಕರೆ ನೀಡಿದರು.
ರಾಜ್ಯವನ್ನು ದುರ್ಬಲಗೊಳಿಸಲು, ಜಾತಿ ಆಧಾರದ ಮೇಲೆ ವಿಭಜನೆ ಮಾಡಿ, ದೇಶದ್ರೋಹಿಗಳನ್ನು ಬಗಲಿನಲ್ಲಿಟ್ಟುಕೊಂಡು ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್ಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ 104 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 150 ಸ್ಥಾನ ಗೆಲ್ಲುವುದು ನಿಶ್ಚಿತ. ತನ್ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೇರಲಿದೆ. ಇದಕ್ಕಾಗಿ ಕಾರ್ಯಕರ್ತರು ಸರಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಿ ಪಕ್ಷಕ್ಕಾಗಿ ದುಡಿಯಬೇಕು ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತ್ತು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿದರು. ಇದೇ ಸಂದರ್ಭ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಬೂತ್ ಅಧ್ಯಕ್ಷರನ್ನು ಗೌರವಿಸಲಾಯಿತು. ಸುಂದರ ಬೈಂದೂರು ಯೋಜನೆಗಳು ನೂರಾರು ಕೈಪಿಡಿ ಬಿಡುಗಡೆಗೊಳಿಸಲಾಯಿತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ವಿಧಾನಪರಿಷತ್ ಸದಸ್ಯ ನವೀನ್ ಕೆ.ಎಸ್., ಉಡುಪಿ ವಿಭಾಗೀಯ ಪ್ರಭಾರಿ ಉದಯಕುಮಾರ್ ಶೆಟ್ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ, ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಬಿಜೆಪಿ ಮುಖಂಡರಾದ ಯಶಪಾಲ ಸುವರ್ಣ, ಕಿಶೋರ್ ಕುಮಾರ್ ಕುಂದಾಪುರ, ಪ್ರಕಾಶ ಪೂಜಾರಿ ಜೆಡ್ಡು, ರವಿ ಶೆಟ್ಟಿಗಾರ್ ತ್ರಾಸಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
ವಿ.ಎಸ್. ಆಚಾರ್ಯ ಮತ್ತು ಎ.ಜಿ.ಕೊಡ್ಗಿ ಅವರನ್ನು ಸ್ಮರಿಸಿದ ನಡ್ಡಾ - ತನಗೂ ವಿ.ಎಸ್ ಆಚಾರ್ಯರಿಗೂ 25-30 ವರ್ಷಗಳ ಅಂತರವಿತ್ತು. ಆದರೆ ಅವರೊಬ್ಬ ಬಿಜೆಪಿ ಕಾರ್ಯಕರ್ತನಾಗಿ, ಬಿಜೆಪಿಯನ್ನು ಕಟ್ಟಿ ಬೆಳೆಸಿ ಸಚಿವರಾದವರು. ಶುದ್ದ ಹಸ್ತದ, ಪ್ರಮಾಣಿಕ ರಾಜಕಾರಣಿಯಾದ ಆಚಾರ್ಯರ ಜೊತೆ ಕೆಲಸ ಮಾಡುವ ಅವಕಾಶವೂ ದೊರಕಿತ್ತು. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಯಶಸ್ಸು ಮತ್ತು ಸಾರ್ವಜನಿಕ ಬೆಂಬಲ ದೊರಕಿದ್ದು ಉಡುಪಿಯಲ್ಲಿ. ಅದೇ ರೀತಿ ಈ ಭಾಗದ ಎ.ಜಿ.ಕೊಡ್ಗಿ ಅವರ ಸೇವೆಯನ್ನು ಸ್ಮರಿಸಿಕೊಂಡು ಅವರು ಇಂತಹ ನಾಯಕರಿಂದಲೇ ಉಡುಪಿಯಲ್ಲಿ ಪಕ್ಷ ಸದೃಢವಾಗಿ ಬೆಳೆದು ನಿಂತಿದೆ ಎಂದು ಅವರನ್ನು ಸ್ಮರಿಸಿದರು.