ಬಂಟ್ವಾಳ, ಫೆ 20 (DaijiworldNews/HR): ರೈಲು ಡಿಕ್ಕಿಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಮ್ಟೂರು ಎಂಬಲ್ಲಿ ಫೆ.20 ರಂದು ಸೋಮವಾರ ಮುಂಜಾನೆ ನಡೆದಿದೆ.
ಬಿಜಾಪುರ ಮೂಲದ ಮಲ್ಲು ಆಧಿಮಣಿ ಮೃತಪಟ್ಟ ಅವಿವಾಹಿತ ಯುವಕ.
ಬಿಜಾಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈತ ಇತ್ತೀಚಿಗೆ ಮಾನಸಿಕವಾಗಿ ಖಿನ್ನತೆಯಿಂದ ಇದ್ದ ಎಂದು ಹೇಳಲಾಗಿದ್ದು, ಫೆ.17 ರಂದು ಶುಕ್ರವಾರ ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದ ಎಂದು ಮನೆಯವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಆನಾರೋಗ್ಯದಿಂದ ಇರುವ ಈತನಿಗೆ ಔಷಧ ಪಡೆಯುತ್ತಿದ್ದು,ಮಾನಸಿಕವಾಗಿ ಖಿನ್ನತೆಯಿದ್ದ ಈತ ಕೂಲಿಯನ್ನು ಅರಸಿಕೊಂಡು ದ.ಕ.ಜಿಲ್ಲೆಗೆ ಬಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು – ಬೆಂಗಳೂರು ರೈಲು ಹಳಿಯ ಅಮ್ಟೂರು ತಿರುವಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಧ್ಯ ರಾತ್ರಿ ರೈಲು ಡಿಕ್ಕಿ ಹೊಡೆದು ಈತನ ತಲೆಗೆ ಗಂಭೀರ ವಾಗಿ ಗಾಯವಾಗಿ ರಕ್ತಸ್ರಾವ ವಾಗಿ ಮೃತಪಟ್ಟಿರಬೇಕು ಎಂದು ಊಹಿಸಲಾಗಿದೆ.
ರೈಲ್ವೆ ಟ್ರಾಕ್ ಪೆಟ್ರೋಲಿಂಗ್ ಮಾಡುವ ಸಿಬ್ಬಂದಿಗಳು ಮೃತದೇಹವನ್ನು ಗಮನಿಸಿ ಇಲಾಖೆಯ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಂಗಳೂರು ರೈಲ್ವೆ ಪೋಲೀಸ್ ಇನ್ಸ್ ಪೆಕ್ಟರ್ ಮೋಹನ್ ಹಾಗೂ ಎ.ಎಸ್ ಐ.ಮಧುಚಂದ್ರ ಸ್ಥಳಕ್ಕೆ ಜೊತೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿರಿಸಿ ಮನೆಯವರನ್ನು ಸಂಪರ್ಕ ಮಾಡಿದ್ದಾರೆ.
ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.