ಕಾರ್ಕಳ, ಫೆ 20 (DaijiworldNews/MS): ಐತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಶನಿವಾರ ಸಂಭ್ರಮದ ವರ್ಷಾವಧಿ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಬೆಡಿ ಮಹೋತ್ಸದ ಸಂದರ್ಭದಲ್ಲಿ ನಡೆದಿದ್ದ ಪಟಾಕಿ ದುರ್ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಕಿರಿದಾದ ಮೈದಾನದಲ್ಲಿ ಜನಸ್ತೋಮದ ನಡುವೆ ಬೆಡಿ ಸಿಡಿಸುವ ಪ್ರದರ್ಶನ ಏರ್ಪಡಿಸಿರುವುದು ಘಟನೆ ತೀವ್ರತೆಗೆ ಕಾರಣವಾಗಿದೆ. ಪಟಾಕಿಯೊಂದು ಬಾನ್ನೆತ್ತರಕ್ಕೆ ಜಿಗಿಯುತ್ತಿದ್ದಂತೆ ನೆರೆದ ಜನಸ್ತೋಮದತ್ತ ನುಗ್ಗಿ ಬಿಟ್ಟಿದೆ. ನೆರೆದ ಜನಸ್ತೋಮ ದಿಕ್ಕಪಾಲಾಗಿ ಓಡುವ ಪ್ರಯತ್ನದಲ್ಲಿ ಕೆಲವರು ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಇತ್ತ ಸಿಡಿದ ಪಟಾಕಿ ಬೆಂಕಿಗೆ ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಯುವಕನೊಬ್ಬನ ಪ್ಯಾಂಟ್ ಬೆಂಕಿಯ ಜ್ವಾಲೆಗೆ ಸುಟ್ಟು ಕರಗಲಾಗಿದ್ದು, ಅಪಾಯದಿಂದ ಪಾರಾಗಲು ಓಡಿ ಹೋಗುವ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಟಾಕಿ ಸಿಡಿಸುವ ಪ್ರದರ್ಶದ ಸಂದರ್ಭದಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಲು ಶ್ರೀ ಕ್ಷೇತ್ರ ಆಡಳಿತ ಮಂಡಳಿ ತಾಲೂಕು ಆಡಳಿತಾಧಿಕಾರಿ ವಿಫಲಗೊಂಡಿರುವುದು ಘಟನೆಯಲ್ಲಿ ಹೆಚ್ಚಿನವರು ಗಾಯಗೊಂಡಿರಲು ಕಾರಣವೆಂಬ ಆರೋಪವು ಕೇಳಿಬರುತ್ತಿದೆ.
ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.