ಕಡಬ, ಫೆ 20 (DaijiworldNews/MS): ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಇಬ್ಬರು ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಮಂಗಳೂರು ವಿಭಾಗದ ಡಿಎಫ್ಓ ದಿನೇಶ್ ಕುಮಾರ್ ಭೇಟಿ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಸಂಜೆಯೊಳಗಡೆ ಆನೆಗಳನ್ನು ಹಿಡಿಯುವ ವ್ಯವಸ್ಥೆ ಮಾಡುತ್ತೇವೆ. ನಾಗರಹೊಳೆ, ದುಬಾರೆ ಆನೆ ಕ್ಯಾಂಪ್ ನಲ್ಲಿರುವ ಪಳಗಿದ ಆನೆಗಳನ್ನು ತಂದು ಕಾಡಾನೆ ಹಿಡಿಯುತ್ತೇವೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.
"ಈ ಭಾಗದಲ್ಲಿ ನಿರಂತರವಾಗಿ ಆನೆ ಹಾವಳಿ ಆಗುತ್ತಿದ್ದರೂ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ. ಮೌಖಿಕ ಭರವಸೆ ಬೇಡ ಲಿಖಿತವಾಗಿ ಕೊಡಿ" ಎಂದು ಸ್ಥಳೀಯರ ಪಟ್ಟುಹಿಡಿದಿದ್ದಾರೆ.
ನಾನು ಇಲ್ಲೇ ಉಳಿದು ಇಂದೇ ಕಾರ್ಯಚರಣೆ ಮಾಡುತ್ತೇನೆ ಸಾರ್ವಜನಿಕರಿಗೆ ಡಿಫ್ಓ ಭರವಸೆ ನೀಡಿದ್ದಾರೆ.
ಇಂದು ಬೆಳಗ್ಗೆ ದಾಳಿ ನಡೆಸಿದ್ದ ಕಾಡಾನೆ ರಂಜಿತಾ (21) ಹಾಗೂ ರಮೇಶ್ ರೈ ನೈಲ (55) ಕೊಂದು ಹಾಕಿತ್ತು. ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿ ಬಾರದೆ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.