ಪುತ್ತೂರು, ಫೆ 20 (DaijiworldNews/HR): ದರ್ಬೆಯಲ್ಲಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣದ ವಿಚಾರಣೆಗೆ ಹಾಜರಾಗದೆ ಎಂಟು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಪೊಲೀಸರು ಆರೋಪಿಯನ್ನು ಫೆಬ್ರವರಿ 19 ರಂದು ಸವಣೂರಿನ ಅಫ್ರಾಝ್ ಪ್ಯಾರಡೈಸ್ ಅಪಾರ್ಟ್ಮೆಂಟ್ ಕಟ್ಟಡದಿಂದ ಬಂಧಿಸಿದ್ದಾರೆ.
ಮಾಡನ್ನೂರು ಗ್ರಾಮದ ಕೊಂಬಾಳಿ ನಿವಾಸಿ ಸುಲೈಮಾನ್ ಎಂಬಾತನೇ ಬಂಧಿತ ಆರೋಪಿ.
2021ರಲ್ಲಿ, ಸುಲೈಮಾನ್ ದರ್ಬೆಯ ಹೋಟೆಲ್ಗೆ ಅಕ್ರಮವಾಗಿ ನುಗ್ಗಿ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಸುಲೈಮಾನ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಅವನ ವಿರುದ್ಧ ವಾರೆಂಟ್ ಜಾರಿ ಮಾಡಲಾಗಿತ್ತು.
ಪೊಲೀಸರು ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.