ಸುಳ್ಯ, ಫೆ 18 (DaijiworldNews/MS): ಸ್ವಂತ ಅಳಿಯನನ್ನೇ ಕಿಡ್ನ್ಯಾಪ್ ಮಾಡಿಸಿ ಆಸ್ಪತ್ರೆಗೆ ದಾಖಲಿಸಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ನಾಯಕಿ, ಸುಳ್ಯದ ದಿವ್ಯಪ್ರಭಾ ಹಾಗೂ ಅವರ ಕುಟುಂಬದ ಐವರ ವಿರುದ್ದ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಿವ್ಯಪ್ರಭಾ ಅವರ ಸ್ವಂತ ಅಳಿಯ ಬೆಳ್ಳಾರೆ ನಿವಾಸಿ ನವೀನ್. ಎಂ ಗೌಡ (32) ನೀಡಿದ ದೂರಿನ ಆಧಾರದ ಮೇಲೆ ದಿವ್ಯಪ್ರಭಾ, ಅವರ ಮಗಳು ಸ್ಪಂದನಾ, ಪರಶುರಾಮ್, ಸ್ಪರ್ಶಿತಾ ,ಮಹದೇವ ಗೌಡ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ದೂರುದಾರ ನವೀನ್ ಎಂ. ಗೌಡ ಅವರು ದಿವ್ಯಪ್ರಭಾ ಪುತ್ರಿ ಸ್ಪಂದನಾ ಅವರನ್ನು 2019ರ ಫೆಬ್ರುವರಿಯಲ್ಲಿ ವಿವಾಹವಾಗಿದ್ದು 2022ರ ಅಕ್ಟೋಬರ್ನಿಂದ ನವೀನ್ ಮತ್ತು ಸ್ಪಂದನಾ ನಡುವೆ ಸಂಸಾರಿಕ ಮನಸ್ತಾಪ ಉಂಟಾಗಿ ಎರಡೂ ಕುಟುಂಬಗಳ ನಡುವೆ ಹಲವು ಬಾರಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು.
ಈ ಮಧ್ಯೆ ಸ್ಪಂದನಾ ಅವರಿಗೆ ಬೇರೆಯವರ ಜತೆ ಅನೈತಿಕ ಸಂಬಂಧವಿದ್ದು ಮೊಬೈಲ್ನಲ್ಲಿ ನಡೆಸಿದ್ದ ಅಶ್ಲೀಲ ಚಾಟ್ಗಳು ಸಿಕ್ಕಿದ್ದರಿಂದ ದೂರವಾಗಿದ್ದೆ ಎಂದು ದೂರಿನಲ್ಲಿ ನವೀನ್ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗಳು ಒಳಸಂಚು ರೂಪಿಸಿ 2022 ಡಿ.19ರಂದು ಮನೆಗೆ ಬಂದು, ಬಲವಂತವಾಗಿ ನನ್ನ ಕೈಕಾಲು ಕಟ್ಟಿಕೊಂಡು ಆಂಬ್ಯುಲೆನ್ಸ್ನಲ್ಲಿ ಬೆಂಗಳೂರಿನ ಜೆ.ಪಿ. ನಗರದ ಆಸ್ಪತ್ರೆಗೆ ಕರೆದುಕೊಂಡು ಬಂದು ಆಸ್ಪತ್ರೆ ವೈದ್ಯರ ಜತೆಗೆ ಒಳ ಒಪ್ಪಂದದ ಮಾತುಕತೆ ನಡೆಸಿ ನನ್ನನ್ನು ಮಾನಸಿಕ ಅಸ್ವಸ್ಥ ಎಂಬುದಾಗಿ ಬಿಂಬಿಸಿ ಅಕ್ರಮ ಬಂಧನದಲ್ಲಿರಿಸಿ ಚಿಕಿತ್ಸೆ ಪ್ರಾರಂಭಿಸಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಸ್ಪತ್ರೆಯಲ್ಲಿ ನನ್ನ ಮೇಲೆ ಹಲ್ಲೆ ಮಾಡಿ ಚಿಕಿತ್ಸೆಗೆ ಸಮ್ಮತಿ ನೀಡಿರುವುದಾಗಿ ಬಿಂಬಿಸಿದ್ದರು ಕೆಲವು ಕಾಗದ ಪತ್ರಗಳಿಗೆ ಬಲವಂತವಾಗಿ ಸಹಿ ಹಾಕುವಂತೆ ಒತ್ತಾಯ ಮಾಡುತ್ತಿದ್ದರು.
ಅಪಹರಣದ ಸಂಬಂಧ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಸಂಬಂಧ ಹೈಕೋರ್ಟ್ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ 2022ರ ಡಿ. 22ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದೇನೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಫ್ಐಆರ್ನಲ್ಲಿ ನವೀನ್ ಉಲ್ಲೇಖಿಸಿದ್ದಾರೆ.