ಸುಬ್ರಹ್ಮಣ್ಯ, ಫೆ. 19, (DaijiworldNews/SM): ಮಹಾಶಿವರಾತ್ರಿ ಹಾಗೂ ರಜಾ ಹಿನ್ನಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಬಾರೀ ಸಂಖ್ಯೆಯ ಭಕ್ತರ ಆಗಮನವಾಗಿದೆ.
ಮಹಾ ಶಿವರಾತ್ರಿ ಅಂಗವಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಾರೆ. ಬಳಿಕ ಮರುದಿನ ಧರ್ಮಸ್ಥಳದಿಂದ ನೇರವಾಗಿ ಕುಕ್ಕೆಗೆ ಆಗಮಿಸುತ್ತಾರೆ. ಇದರಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಬಾರೀ ಸಂಖ್ಯೆಯ ಭಕ್ತರ ಸಂಧಣಿ ಕಂಡುಬಂದಿದೆ. ಕ್ಷೇತ್ರಕ್ಕೆ ಅಡಗಮಿಸಿದ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ನೆರವೇರಿಸಿ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಬಂದು ಶ್ರೀ ದೇವರ ದರುಶನ ಪಡೆದು, ಅನ್ನಪ್ರಸಾದ ಸ್ವೀಕರಿಸಿ, ತಮ್ಮ ಊರುಗಳತ್ತ ತೆರಳಿದ್ದಾರೆ.
ರವಿವಾರ ಮುಂಜಾನೆಯಿಂದಲೇ ಕುಕ್ಕೆ ಹಾಗೂ ಕುಮಾರಧಾರ ಸ್ನಾನ ಘಟ್ಟ ಬಳಿ ಬಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸ್ನಾನಘಟ್ಟ ಸಂಪೂರ್ಣ ಭಕ್ತರಿಂದಲೇ ತುಂಬಿತ್ತು. ಬಳಿಕ ಕ್ಷೇತ್ರದ ದೇವಸ್ಥಾನದೊಳಗೂ ಭಕ್ತರ ಸಂಧಣಿ ಕಂಡುಬಂದಿದೆ. ಪೇಟೆಯಲ್ಲೂ ಬಾರೀ ವಾಹನ ಹಾಗೂ ಜನರ ಓಡಾಟ ಇದ್ದು, ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ವಾಹನ ನಿಲುಗಡೆ ಹಾಗೂ ಭಕ್ತರಿಗೆ ಪೂರಕ ವ್ಯವಸ್ಥೆ ಹಾಗೂ ಮಾರ್ಗದರ್ಶನ ನೀಡಿದರು.
ಬಸ್ ಗಾಗಿ ಪರದಾಟ:
ಧರ್ಮಸ್ಥಳದಿಂದ ಆಗಮಿಸಿದ ಸರಕಾರಿ ಬಸ್ ಗಳಲ್ಲಿ ಭಕ್ತರು ತುಂಬಿ ತುಳುತ್ತಿರುವುದು ಕಂಡುಬಂದಿದೆ. ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಹೆಚ್ಚುವರಿ ಬಸ್ಸುಗಳನ್ನು ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಧ್ಯೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸುಬ್ರಹ್ಮಣ್ಯದಿಂದ ಸಕಲೇಶಪುರ, ಹಾಸನ ಸೇರಿದಂತೆ ಇತರೆಡೆ ತೆರಳಲು ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡದ ಪರಿಣಾಮ ಭಕ್ತರು ತೊಂದರೆ ಅನುಭವಿಸಿದ್ದು, ಕೆಎಸ್ಆರ್ಟಿಸಿ ಅಧಿಕಾರಿಗಳ ಜತೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಆಗಮಿಸಿ ಭಕ್ತರನ್ನು ಸಮಾಧಾನ ಪಡಿಸಿದ್ದು, ಬಳಿಕ ಕೆಎಸ್ಆರ್ಟಿಸಿ ಅವರು ಭಕ್ತರ ಬೇಡಿಕೆ ಪ್ರದೇಶಗಳಿಗೆ ಹೆಚ್ಚುವರಿ ಬಸ್ಸುಗಳನ್ನು ಕಲ್ಪಿಸಿ ಭಕ್ತರಿಗೆ ಊರಿಗೆ ತೆರಳಲು ಕ್ರಮಕೈಗೊಂಡರು ಎಂದು ತಿಳಿದುಬಂದಿದೆ. ಮಹಾ ಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳ ಕೆಎಸ್ಆರ್ಟಿಸಿ ಘಟಕಕ್ಕೆ ಕೋಟ್ಯಾಂತರ ಆದಾಯ ಗಳಿಕೆಯು ವರ್ಷಂಪ್ರತಿ ಆಗುತ್ತಿರುತ್ತದೆ.