ಉಡುಪಿ, ಫೆ 18 (DaijiworldNews/DB): ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಇವರು ಆಯೋಜಿಸಿದ ರಾಜ್ಯ ಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆಯಲ್ಲಿ ಕಾಪು ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ 20 ಜಿಲ್ಲೆಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ ಕಬ್ಸ್ ವಿಭಾಗದಲ್ಲಿ ಆಯುಷ್ ರೇಗನ್ ಮಿನೇಜಸ್ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ ಪಿಜಿಆರ್ ಸಿಂದ್ಯಾ ಅವರು ಬಹುಮಾನ ವಿತರಿಸಿ ಶುಭ ಹಾರೈಸಿದ್ದಾರೆ.
ಆಯುಷ್ ಕಾಪು ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಕಾಪು ಶಂಕರಪುರದ ಅಲ್ವೀನ್ ಮಿನೇಜಸ್ ಹಾಗೂ ಸುನೀತಾ ಮಿನೇಜಸ್ ದಂಪತಿಗಳ ಪುತ್ರನಾದ 9 ವರ್ಷದ ಆಯುಷ್ ರೇಗನ್ ಅವರು ಶಂಕರಪುರದ ಸೈಂಟ್ ಜಾನ್ಸ್ ಅಕಾಡೆಮಿಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಒಲಿವರ್ ರೆಬೆಲ್ಲೋರವರಿಂದ ತರಬೇತಿ ಪಡೆದುಕೊಂಡಿದ್ದು, ಈ ಹಿಂದೆ ಉಡುಪಿ ಧರ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯ ಮಕ್ಕಳ ವಿಭಾಗದಲ್ಲಿ ಪ್ರಥಮ ಹಾಗೂ ಕೊಂಕಣಿ ನಾಟಕ ಸಭಾ ಮಂಗಳೂರು ಆಯೋಜಿಸಿದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಅನೇಕ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಗಾಯನ ಪ್ರತಿಭೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.