ಬಂಟ್ವಾಳ, ಫೆ 18 (DaijiworldNews/DB): ಪುದು ಗ್ರಾಮ ಪಂಂಚಾಯತ್ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಮುಕ್ತಾಯಗೊಂಡಿದೆ. ಇದೀಗ 34 ಸ್ಥಾನಗಳಿಗೆ ಅಂತಿಮವಾಗಿ 99 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಒಟ್ಟು 103 ನಾಮಪತ್ರಗಳ ಪೈಕಿ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದರೆ ಉಳಿದಂತೆ 102 ನಾಮಪತ್ರಗಳ ಪೈಕಿ ಮೂವರು ಶುಕ್ರವಾರ ನಾಮಪತ್ರವನ್ನು ಹಿಂಪಡೆದಿದ್ದಾರೆ. ಅಂತಿಮವಾಗಿ 99 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ತಾಲೂಕಿನ ಚುನಾವಣಾ ಕಚೇರಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ 34 , ಬಿಜೆಪಿ 32, ಎಸ್ಡಿಪಿಐ 28 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದು, ಐವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಚುನಾವಣಾಧಿಕಾರಿಗಳು ಈಗಾಗಲೇ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಹಂಚಿಕೆ ಮಾಡಿದ್ದಾರೆ.
ಪುದು ಗ್ರಾಮ ಪಂಚಾಯತ್ನ 34 ಸ್ಥಾನಗಳಿಗೆ ಫೆಬ್ರವರಿ 25ರಂದು ಚುನಾವಣೆ ನಡೆಯಲಿದೆ. ಈ ಬಾರಿ ಅತೀ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಚುನಾವಣಾ ಕಾವು ರಂಗೇರಿದೆ. ಶನಿವಾರದಿಂದ ಒಂದು ವಾರ ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಅವಕಾಶವಿದ್ದು, ವಿಧಾನ ಸಭಾ ಚುನಾವಣೆ ಸನಿಹದಲ್ಲೇ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡು ಫರಂಗಿಪೇಟೆ ಪರಿಸರದಲ್ಲೇ ಠಿಕಾಣಿ ಹೂಡಲಿದ್ದಾರೆಂದು ತಿಳಿದು ಬಂದಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪಕ್ಷ ನಾಯಕರು ಕಳೆದ ಐದು ವರ್ಷದಲ್ಲಿ ಪುದು ಗ್ರಾಮ ಪಂಚಾಯತ್ನಲ್ಲಾಗಿರುವ ಆಡಳಿತ ವೈಫಲ್ಯ, ಮಂಗಳೂರು ಕ್ಷೇತ್ರದ ಶಾಸಕರಿಂದ ಪುದು ಗ್ರಾ.ಪಂ. ವ್ಯಾಪ್ತಿಯನ್ನು ಅಭಿವೃದ್ಧಿಯಲ್ಲಿ ನಿರ್ಲಕ್ಷಿಸಿರುವುದು, ರಾಜ್ಯ, ಕೇಂದ್ರ ಸರಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಇನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಶಾಸಕರು, ಪಕ್ಷದ ನಾಯಕರು, ಪುದು ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷದಲ್ಲಾಗಿರುವ ಅಭಿವೃದ್ದಿ ಕೆಲಸ, ಶಾಸಕರ ಸಾಧನೆಯನ್ನು ಮುಂದಿಟ್ಟು ಪ್ರಚಾರದಲ್ಲಿ ತೊಡಗಿದ್ದಾರೆ. ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪಕ್ಷದ ನಾಯಕರು ಎರಡೂ ರಾಷ್ಟ್ರೀಯ ಪಕ್ಷಗಳ ವೈಫಲ್ಯವನ್ನು ಮುಂದಿರಿಸಿ ಮತ ಯಾಚಿಸುತ್ತಿದ್ದಾರೆ. ಮನೆ, ಮನೆ ಪ್ರಚಾರದ ಜತೆಗೆ ಅಭ್ಯರ್ಥಿಗಳು ಅವರ ಬೆಂಬಲಿಗರ ಮೂಲಕ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಪ್ರಚಾರ ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಪುದು ಗ್ರಾ.ಪಂ.ಚುನಾವಣಾ ಕಾವು ಏರುತ್ತಿದೆ.