ಮಂಗಳೂರು, ಫೆ 18 (DaijiworldNews/DB): ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಚುನಾವಣಾ ತಯಾರಿ ಶುರುವಾಗಿದೆ. ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಏರ್ಪಡುವ ನಿರೀಕ್ಷೆ ಇದ್ದು, ಬಿಜೆಪಿ ಶಾಸಕರ ವಿರುದ್ದ ಹೋರಾಡಲು ಸೂಕ್ತ ಅಭ್ಯರ್ಥಿಗಳನ್ನು ಈ ಎಲ್ಲಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
2013ರ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರ ಹೊರತುಪಡಿಸಿ ದಕ್ಷಿಣ ಕನ್ನಡದಲ್ಲಿ 7 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿತ್ತು. ಆದರೆ 2018ರಲ್ಲಿ ಯು.ಟಿ. ಖಾದರ್ ಉಳಿಸಿಕೊಂಡಿದ್ದ ಮಂಗಳೂರು ಕ್ಷೇತ್ರವನ್ನು ಹೊರತುಪಡಿಸಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ವಶದಲ್ಲಿದ್ದ ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ.
ರಾಜ್ಯ ವಿಧಾನಸಭೆಗೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದ್ದು, ಹಿಂದಿನಿಂದಲೂ ಕಾಂಗ್ರೆಸ್ ಕೋಟೆಯಾಗಿದ್ದ ಮಂಗಳೂರು ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಈಗಾಗಲೇ ಇರುವ ಮಂಗಳೂರು ಕ್ಷೇತ್ರವನ್ನು ಉಳಿಸಿಕೊಳ್ಳುವುರ ಜೊತೆಗೆ ರಾಜ್ಯ ಮತ್ತು ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಇತರ ಸ್ಥಾನಗಳನ್ನು ತನ್ನತ್ತ ಕಸಿದುಕೊಳ್ಳುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ.
1957ರಿಂದ 2008ರವರೆಗೆ, ಇಂದಿನ ಮಂಗಳೂರು ಕ್ಷೇತ್ರವನ್ನು ಉಳ್ಳಾಲ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. 1957ರಿಂದ, ಮಂಗಳೂರು ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಏಕೆಂದರೆ ಈ ಅವಧಿಯಲ್ಲಿ ನಡೆದ 15 ಚುನಾವಣೆಗಳಲ್ಲಿ ಪಕ್ಷವು 12 ಬಾರಿ ಗೆದ್ದಿದೆ ಮತ್ತು 1994ರಲ್ಲಿ ಬಿಜೆಪಿಯ ಜಯರಾಮ ಶೆಟ್ಟಿ 24,412 ಮತಗಳನ್ನು ಪಡೆದು ಸ್ಥಾನವನ್ನು ಗೆದ್ದಿದ್ದರು.
ಯು. ಟಿ. ಖಾದರ್ 2007ರಿಂದ ಮಂಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಇದೀಗ 2023ರ ಚುನಾವಣೆಯಲ್ಲಿ 5ನೇ ಅವಧಿಯ ಮೇಲೆ ಕಣ್ಣಿಟ್ಟಿದ್ದಾರೆ. ಖಾದರ್ ಅವರು 2007ರಲ್ಲಿ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಕ್ಷೇತ್ರವನ್ನು ಗೆದ್ದಿದ್ದರು.
ತಾವು ಶಾಸಕರಾಗಿದ್ದ ಅವಧಿಯಲ್ಲಿ ಖಾದರ್ ಅವರು ಯಾವುದೇ ವಿವಾದಗಳಿಗೆ ಕಾರಣರಾಗದೆ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿದ್ದಾರೆ. ಉಳ್ಳಾಲದಲ್ಲಿ ಮುಂಚೂಣಿಯಲ್ಲಿ ಮುನ್ನಡೆಯುತ್ತಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಪರಿವರ್ತನೆಗೆ ಕಾರಣರಾಗಿದ್ದಾರೆ. ಖಾದರ್ ಅವರು ಉಳ್ಳಾಲದ ಜನರಲ್ಲಿ ವಿಶ್ವಾಸ ಗಳಿಸಿದ್ದು, ಬಿಜೆಪಿಗೆ ಗೆಲ್ಲಲು ಕಠಿಣ ಕ್ಷೇತ್ರವಾಗಿ ಪರಿಣಮಿಸಿದೆ. 2018ರಲ್ಲಿ ಬಿಜೆಪಿಯನ್ನು 19,109 ಮತಗಳ ಅಂತರದಿಂದ ಸೋಲಿಸುವಲ್ಲಿ ಖಾದರ್ ಯಶಸ್ವಿಯಾಗಿದ್ದರು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಖಾದರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚಿನ ದಿನಗಳಲ್ಲಿ ತಮ್ಮ ವಿರುದ್ಧ ಹಲವಾರು ಆರೋಪಗಳು ಬಂದರೂ, ಖಾದರ್ ಅವರು ತಮ್ಮ ವಿರುದ್ಧ ನಡೆಯುವ ಯಾವುದೇ ರೀತಿಯ ಪರಿಸ್ಥಿತಿಯನ್ನು ಶಾಂತ ಮತ್ತು ಸಂಯಮದಲ್ಲಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿ ಮಂಗಳೂರು ಕ್ಷೇತ್ರದಲ್ಲಿ ಖಾದರ್ ವಿರುದ್ಧ ಬಿಜೆಪಿ ಸಂತೋಷ್ ಕುಮಾರ್ ಬೋಳಿಯಾರ್, ಸತೀಶ್ ಕುಂಪಲ ಮತ್ತು ಶರಣ್ ಪಂಪ್ವೆಲ್ ಸೇರಿದಂತೆ ಇತರ ಸಂಭಾವ್ಯರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಶರಣ್ ಪಂಪ್ವೆಲ್ ಅವರು ಇತ್ತೀಚೆಗೆ ಉಳ್ಳಾಲವನ್ನು ಭಯೋತ್ಪಾದನೆಯ ಸ್ಲೀಪರ್ ಸೆಲ್ ಎಂದು ಕರೆದಿದ್ದರು. ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಅವರು ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದರು. ಅದೇ ಸಮಯದಲ್ಲಿ ಆರೆಸ್ಸೆಸ್ ಮುಖಂಡರು ಮತ್ತು ಹಿಂದೂ ಕಾರ್ಯಕರ್ತರು ಮಂಗಳೂರು ಕ್ಷೇತ್ರಕ್ಕೆ ಮುಸ್ಲಿಮೇತರ ಶಾಸಕರನ್ನು ಪ್ರತಿನಿಧಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕ್ಷೇತ್ರದ ಶಾಸಕರಾಗಿ ದಾಖಲೆಯ ನಾಲ್ಕನೇ ಅವಧಿಯ ಮೇಲೆ ಕಣ್ಣಿಟ್ಟಿರುವ ಖಾದರ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ಮಂಗಳೂರು ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಘೋಷಿಸದ ಎಸ್ಡಿಪಿಐ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡದ ಮೂರು ಕ್ಷೇತ್ರಗಳಿಗೆ ಎಸ್ಡಿಪಿಐ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. 2023ರಲ್ಲಿ ಪುತ್ತೂರು ಕ್ಷೇತ್ರಕ್ಕೆ ಶಾಫಿ ಬೆಳ್ಳಾರೆ ಹೆಸರನ್ನು ಘೋಷಣೆ ಮಾಡಿದೆ. 2013ರಲ್ಲಿ ಮೊಹಮ್ಮದ್ ಅಕ್ರಂ ಹಾಸನ್ ಅವರು ಮಂಗಳೂರು ಕ್ಷೇತ್ರದಲ್ಲಿ ಎಸ್ಡಿಪಿಐ ಟಿಕೆಟ್ನಲ್ಲಿ ಸ್ಪರ್ಧಿಸಿ ಖಾದರ್ ಅವರ 69,450 ಮತಗಳ ವಿರುದ್ಧ ಕೇವಲ 4,808 ಮತಗಳನ್ನು ಗಳಿಸಿದ್ದರು.
ಎಸ್ಡಿಪಿಐ ಈಗಾಗಲೇ 60 ಗ್ರಾಮ ಪಂಚಾಯತ್ ಸದಸ್ಯರು, 6 ಕೌನ್ಸಿಲರ್ಗಳನ್ನು ಹೊಂದಿದ್ದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ವಿಶ್ವಾಸವನ್ನು ಹೆಚ್ಚಿಸಿದೆ. ಮಂಗಳೂರು ಕ್ಷೇತ್ರಕ್ಕೆ ಎಸ್ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಖಾದರ್ಗೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.
2018ರ ಫಲಿತಾಂಶ
ಯು.ಟಿ. ಖಾದರ್ (ಕಾಂಗ್ರೆಸ್) - 80,813 ಮತ
ಸಂತೋಷ್ ಕುಮಾರ್ ರೈ (ಬಿಜೆಪಿ) - 61,704 ಮತ
2013ರ ಫಲಿತಾಂಶ
ಯು.ಟಿ. ಖಾದರ್ (ಕಾಂಗ್ರೆಸ್) - 69,450 ಮತ
ಚಂದ್ರಹಾಸ್ ಉಳ್ಳಾಲ್ (ಬಿಜೆಪಿ) - 40,339 ಮತ
ಉಳ್ಳಾಲ-ಮಂಗಳೂರು ವಿಧಾನಸಭಾ ಕ್ಷೇತ್ರದ ದಾಖಲೆ
ಒಟ್ಟು ಚುನಾವಣೆ - 15
ಕಾಂಗ್ರೆಸ್ ಗೆಲುವು - 12
ಸಿಪಿಐ, ಸಿಪಿಐಎಂ - 2 (1962 ಮತ್ತು 1983)
ಬಿಜೆಪಿ - 1 (1994)