ಮಂಗಳೂರು/ಉಡುಪಿ, ಫೆ 18 (DaijiworldNews/DB): ಕರಾವಳಿಯಾದ್ಯಂತ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಪೂಜಾ ವಿಧಿಗಳು ಆರಂಭಗೊಂಡಿವೆ. ಶಿವ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ, ಉಡುಪಿಯ ವಿವಿಧ ಶಿವ ದೇವಸ್ಥಾನಗಳಲ್ಲಿ ಭಕ್ತಿ, ಸಂಭ್ರಮದಿಂದ ಶಿವರಾತ್ರಿ ಆಚರಣೆ ನಡೆಯುತ್ತಿದೆ. ಶಿವ ದೇವಸ್ಥಾನ ಸೇರಿದಂತೆ ವಿವಿಧ ದೇವಳಗಳಲ್ಲಿ ಶಿವನಿಗೆ ಅಭಿಷೇಕ, ವಿಶೇಷ ಪೂಜೆ, ಅರ್ಚನೆಗಳು ನಡೆಯುತ್ತಿವೆ. ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನಗಳಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಶ್ರೀ ಮಂಗಳಾದೇವಿ ಕ್ಷೇತ್ರ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಳಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ಬಂಟ್ವಾಳ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ವಿಶೇಷ ಪೂಜೆಗಳು ಆರಂಭಗೊಂಡಿದ್ದು, ಧಾರ್ಮಿಕ ಕಾರ್ಯಕ್ರಮ, ಶಿವಮಾಲಾಧಾರಣೆ ಸಂಕೀರ್ತನೆ ನಡೆಯಲಿದೆ. ನರಹರಿ ಪರ್ವತ ಕ್ಷೇತ್ರದಲ್ಲಿಯೂ ಶಿವನಿಗೆ ವಿಶೇಷ ಪೂಜೆ, ಭಜನೆ, ಜಾಗರಣೆ ಜರಗಲಿದೆ. ಇನ್ನು ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನ, ಒಡಿಯೂರು ಕ್ಷೇತ್ರ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಸುರ್ಯ ಸದಾಶಿವರುದ್ರ ದೇವಳ, ಉಜಿರೆ ಶ್ರೀ ಜನಾರ್ದನ ದೇವಸ್ಥಾನ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಶಿವರಾತ್ರಿ ವಿಶೇಷ ಪೂಜೆಗಳು ನಡೆಯುತ್ತಿವೆ.
ಶಿವರಾತ್ರಿ ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಸಂಜೆ ಶಿವಪಂಚಾಕ್ಷರಿ ಪಠಣ ನಡೆಯಲಿದೆ. ರಾತ್ರಿಯಿಂದ ಮುಂಜಾನೆವರೆಗೆ ಭಕ್ತರಿಂದ ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಲಿದೆ. ದೇವರ ದರ್ಶನಕ್ಕಾಗಿ ವಿವಿಧೆಡೆಗಳಲ್ಲಿ ಕಾಲ್ನಡಿಗೆಯಲ್ಲೇ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಚಾರ್ಮಾಡಿಯಲ್ಲಿ ಪಾದಯಾತ್ರಿಗಳನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.
ಇನ್ನು ಉಡುಪಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿಯೂ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾದಿಗಳು ನಡೆಯಲಿವೆ. ಬಿಲ್ವಾರ್ಚನೆ, ಶತರುದ್ರಾಭಿಷೇಕ, ರುದ್ರ, ಚಮಕ ಪಾರಾಯಣಗಳು ನಡೆಯಲಿವೆ.
ಮನೆಗಳಲ್ಲಿ ಜಾಗರಣೆ
ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ಶಿವಭಕ್ತರು ಶಿವರಾತ್ರಿಯಂದು ತಮ್ಮ ಮನೆಗಳಲ್ಲಿಯೂ ಆಚರಣೆಗಳನ್ನು ಹಮ್ಮಿಕೊಂಡಿದ್ದಾರೆ. ಶಿವನಿಗೆ ವಿಶೇಷ ಪೂಜೆಗಳು, ಭಜನೆ, ಜಾಗರಣೆ ಮುಂತಾದ ಆಚರಣೆಗಳು ಕರಾವಳಿಯ ಕೆಲವು ಮನೆಗಳಲ್ಲಿ ನಡೆಯುತ್ತವೆ.