ಮಂಗಳೂರು, ಫೆ 18 (DaijiworldNews/MS):ನಕಲಿ ನೋಟುಗಳನ್ನು ಚಲಾವಣೆ ಮಾಡಿದ ಪ್ರಕರಣದ ಆರೋಪಿಗೆ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷಗಳ ಶಿಕ್ಷೆ ವಿಧಿಸಿದೆ.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ದರ್ಬೆ ಹೌಸ್ನ ಅಬ್ಬಾಸ್ (53) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.
ಅಬ್ಬಾಸ್ 2019ರಲ್ಲಿ ನಕಲಿ ನೋಟುಗಳನ್ನು (ಕಲರ್ ಜೆರಾಕ್ಸ್) ಮುಲ್ಕಿ ಪರಿಸರದಲ್ಲಿ ಚಲಾವಣೆ ಮಾಡುತ್ತಿದ್ದಾಗ ಬಂಧಿಸಲ್ಪಟ್ಟಿದ್ದ. ಆತನಿಂದ 100 ರೂ. ಮುಖ ಬೆಲೆಯ ಒಟ್ಟು 16 ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸಣ್ಣ ಪುಟ್ಟ ವಸ್ತು ಖರೀದಿಸಿ ಚಿಲ್ಲರೆ ಮಾಡಿಕೊಳ್ಳುತ್ತಿದ್ದ.!
ಅಬ್ಬಾಸ್ 2019ರ ಅ.24ರಂದು ನಗರದ ಫಳ್ನೀರ್ ರಸ್ತೆಯಲ್ಲಿರುವ ಜೆರಾಕ್ಸ್ ಅಂಗಡಿಯೊಂದಕ್ಕೆ ತೆರಳಿ 100 ರೂ. ಮುಖಬೆಲೆಯ 3 ಅಸಲಿ ನೋಟುಗಳನ್ನು ನೀಡಿ ಒಟ್ಟು 20 ಕಲರ್ ಜೆರಾಕ್ಸ್ ಮಾಡಿಸಿಕೊಂಡು, ಅದೇ ವರ್ಷದ ನ.5ರಂದು ಮುಲ್ಕಿ ಪೇಟೆಯ ಅಂಗಡಿಯೊಂದಕ್ಕೆ ಒಂದು ನಕಲಿ ನೋಟನ್ನು ನೀಡಿ 1 ಬಾಟಲಿ ನೀರು, ಮತ್ತೊಂದು ಅಂಗಡಿಯಲ್ಲಿ ಇನ್ನೊಂದು ನೋಟು ನೀಡಿ ಬಿಸ್ಕಿಟ್ ಖರೀದಿಸಿದ್ದ. ಇನ್ನೊಂದು ಕಡೆ ಚಹಾ ಮತ್ತು ತಿಂಡಿ ಸೇವಿಸಿದ್ದ. ಅಲ್ಲದೆ ಮತ್ತೊಂದು ನೋಟನ್ನು ನೀಡಿ ಒಬ್ಬರಿಂದ ಚಿಲ್ಲರೆ ಪಡೆದುಕೊಂಡಿದ್ದ. ಹೀಗೆ 4 ನೋಟುಗಳನ್ನು ಚಲಾವಣೆ ಮಾಡಿದ್ದ ಎನ್ನಲಾಗಿದೆ. ಈ ನೋಟಿನ ಬಗ್ಗೆ ಕೆಲವರಿಗೆ ಸಂದೇಹ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಮುಲ್ಕಿ ಠಾಣೆಯ ಎಸ್ಸೈ ಶೀತಲ್ ಅಲಗೂರು, ಕಾನ್ಸ್ಟೆಬಲ್ ಸುರೇಶ್ ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ಬಂಧಿಸಿದ್ದರು.
ಇನ್ಸ್ಪೆಕ್ಟರ್ ಜಯರಾಮ ಡಿ.ಗೌಡ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 489 (ಸಿ)ಯಂತೆ 4 ವರ್ಷಗಳ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಎರಡು ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. ಅಲ್ಲದೆ 489 (ಸಿ)ಯಂತೆ 2 ವರ್ಷದ ಸಾದಾ ಸಜೆ ಮತ್ತು 2,500 ರೂ. ದಂಡ ವಿಧಿಸಿದ್ದಾರೆ. ಈ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಒಂದು ತಿಂಗಳ ಸಾದಾ ಸಜೆ ವಿಧಿಸಿ ಆದೇಶ ನೀಡಿದ್ದಾರೆ.