ಮಂಗಳೂರು, ಫೆ 17 (DaijiworldNews/SM): ರಾಜ್ಯ ಬಜೆಟ್ ನಲ್ಲಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದರು. ಆದರೆ, ನೀಡಿರುವ ಭರವಸೆಯನ್ನು ಈಡೇರಿಸದೆ ಮುಖ್ಯಮಂತ್ರಿಗಳು ಬಿಲ್ಲವ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯ ಎಸಗಿದ್ದಾರೆ ಎಂದು ಶ್ರೀ ಗುರುಬೆಳದಿಂಗಳು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಪದ್ಮರಾಜ್ ಆರ್. ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ನಾರಾಯಣ ಗುರು ನಿಗಮ ಸ್ಥಾಪಿಸಬೇಕೆಂಬುವುದು ನಿರಂತರ ಆಗ್ರಹವಾಗಿದೆ. ಆದರೆ, ನಮ್ಮ ಬೇಡಿಕೆಯನ್ನು ಸರಕಾರ ಈಡೇರಿಸಿಲ್ಲ. ಈ ಹಿಂದೆ ಸಮಾವೇಶ ನಡೆಸಲು ಜನವರಿಯಲ್ಲಿ ತೀರ್ಮಾನಿಸಿದ್ದೇವು. ಆ ಸಂದರ್ಭದಲ್ಲಿ ಬಜೆಟ್ ನಲ್ಲಿ ಘೋಷಿಸುವ ಭರಸವೆ ಸಿಕ್ಕಿತ್ತು. ಆದರೆ, ಇದೀಗ ಬಜೆಟ್ ನಲ್ಲೂ ಅನ್ಯಾಯವೆಸಗಲಾಗಿದೆ ಎಂದರು.
ನಾರಾಯಣ ಗುರು ವಿಚಾರ ವೇದಿಕೆಯ ರಾಜಾಧ್ಯಕ್ಷ ಸತ್ಯಜಿತ್ ಸುರತ್ಕಲ್ನ ಮಾತನಾಡಿ ೧೮ ವರ್ಷ ಹಿಂದೆ ಶೇಂದಿ ನಿಷೇಧ ಜಾರಿಯಾದಾಗಲೇ ನಿಗಮ ಆಗಬೇಕಿತ್ತು. ಮುಂದಿನ ಬಜೆಟಲ್ಲಿ ನಿಗಮ ಘೋಷಿಸುವುದಾಗಿ ಸಿಎಂ ತಿಳಿಸಿದ್ದರು. ಅವಾಗ ಬಿಜೆಪಿಯ ರಾಜ್ಯಾಧ್ಯಕ್ಷರು, ಸಚಿವ ಸುನಿಲ್ ಕುಮಾರ್ ಕೂಡ ಇದ್ದರು. ಆದರೆ ಇಂದು ಬೊಮ್ಮಾಯಿ ಮಾತು ತಪ್ಪಿದ್ದಾರೆ. ಇತ್ತೀಚೆಗೆ ಪ್ರಣವ ಪಾದಯಾತ್ರೆ ಸಮಾರೋಪದಲ್ಲಿ ಕೂಡ ನಿಗಮ ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದರು. ಈ ಬಜೆಟ್ನಲ್ಲಿ ಘೋಷಣೆಯಾಗದ ನಿಗಮವು ಮುಂದೆ ಮರೀಚಿಕೆಯಾಗಿದೆ. ಬಜೆಟ್ ಘೋಷಣೆ ಮಾಡಿದ್ದರೆ ಸಾಕಿತ್ತು. ಮುಂದೆ ಯಾವ ಸರಕಾರ ಬಂದರೂ ನಿಗಮ ಅಧಿಕೃತವಾಗಿ ಇರುತ್ತಿತ್ತು ಎಂದರು.