ಉಡುಪಿ, ಫೆ 17 (DaijiworldNews/SM): ಗೂಡ್ಸ್ ರಿಕ್ಷಾ ಟೆಂಪೊದಿಂದ ವ್ಯಕ್ತಿಯೊಬ್ಬರನ್ನು ರಸ್ತೆ ಬದಿ ಎಸೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಎಸ್ ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಪ್ರತಿಕ್ರಿಯೆ ನೀಡಿದ್ದು, ಇಂದೊಂದು ಕೊಲೆ ಎಂಬುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿಲ್ಲ ಎಂದು ತಿಳಿಸಿದ್ದಾರೆ.
ಫೆ.16ರಂದು ಕೆಮ್ಮಣ್ಣು ಸಂತೆ ಮಾರುಕಟ್ಟೆ ಬಳಿ ಮೃತದೇಹ ಎಸೆದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ಇದೊಂದು ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದಿದ್ದಾರೆ.
ಉಡುಪಿ ಎಪಿಎಂಸಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ನಿವಾಸಿ ಹನುಮಂತ (48) ವಿಪರೀತ ಕುಡಿತದ ಚಟ ಹೊಂದಿದ್ದರು. ವಾರದ ಸಂತೆಯ ಹಿನ್ನೆಲೆಯಲ್ಲಿ ಸಿರಗುಂದ ತಾಲೂಕಿನ ಬಸಿಯಾ ಹಾಗೂ ಚಾಲಕ ಬಳ್ಳಾರಿಯ ಮಂಜುನಾಥ ಕೆಮ್ಮಣ್ಣು ಸಂತೆ ಮಾರುಕಟ್ಟೆಗೆ ತರಕಾರಿ ತಂದು ಮಾರಾಟ ಮಾಡುತ್ತಿದ್ದರು. ಆದರೆ ರಿಕ್ಷಾ ಟೆಂಪೊದಲ್ಲಿ ಹನುಮಂತ ವಿಪರೀತ ಕುಡಿದು ಮಲಗಿದ್ದರು. ಏಳದ ಕಾರಣ ಹನುಮಂತ ಅವರನ್ನು ಟೆಂಪೋದಲ್ಲಿ ಹೊರಗಡೆ ಮಲಗುವ ಜಾಗದಲ್ಲಿ ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ.
ಆದರೆ ವಿಪರೀತ ಕುಡಿದಿರುವುದರಿಂದ ಹನುಮಂತನ ದೇಹ ಅಲುಗಾಡುತ್ತಿರಲಿಲ್ಲ. ಅದನ್ನು ನೋಡಿ ಜನ, ಹನುಮಂತನನ್ನು ಸಾಯಿಸಿ ಎಸೆದು ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದರು ಎನ್ನುವ ಆರಂಭಿಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.