ಕುಂದಾಪುರ, ಮಾ 15(SM): ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಎಲ್ಲಾ ರಾಜಕೀಯ ಪಕ್ಷಗಳು ಎಚ್ಚರಗೊಂಡಿವೆ. ಈ ನಡುವೆಯೇ ಮತದಾನ ನಮ್ಮೆಲ್ಲರ ಹಕ್ಕು ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಜಾಗೃತಿಯನ್ನು ಕೂಡ ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರೂ ಸೇರಿದಂತೆ ಹಲವಾರು ಮಂದಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ಮಹಿಳೆಯರು ವಿನೂತನವಾಗಿ ಜಾಗೃತಿಯನ್ನು ಮೂಡಿಸಿದ್ದಾರೆ. ತಾಲೂಕು ಪಂಚಾಯತ್ ಎದುರು ಸಾಮೂಹಿಕವಾಗಿ ರಂಗೋಲಿ ಬಿಡಿಸುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸಬೇಕೆಂದು ಜಾಗೃತಿ ಮೂಡಿಸಿದ್ದಾರೆ.
ನೂರಾರು ಮಹಿಳೆಯರು ಸ್ಥಳದಲ್ಲಿಯೇ ವಿವಿಧ ವಿನ್ಯಾಸದ ರಂಗೋಲಿಗಳನ್ನು ಬಿಡಿಸಿದರು. ನಂತರ ಶಾಸ್ತ್ರೀವೃತ್ತದ ಸಮೀಪ ಮಾನವ ಸರಪಳಿ ನಡೆಸಿ ಮತದಾನದ ಜಾಗೃತಿ ಮೂಡಿಸಿದರು. ಆ ಮೂಲಕ ಮತದಾನದ ಮಹತ್ವವನ್ನು ಸಾರಿದರು. ಪ್ರತಿಯೊಬ್ಬ ವ್ಯಕ್ತಿಯ ಮತವೂ ಕೂಡ ದೇಶದಲ್ಲಿ ಬದಲಾವಣೆಯನ್ನು ತರಬಹುದು. ಮತದಾನ ಮಾಡುವ ಹಕ್ಕನ್ನು ಎಲ್ಲರೂ ಬಳಸಿಕೊಳ್ಳಬೇಕು. ಅಭ್ಯರ್ಥಿಗಳ ಆಯ್ಕೆ ವಿಚಾರ ವೈಯುಕ್ತಿಕವಾಗಿದ್ದು, ಹಕ್ಕು ಚಲಾಯಿಸುವುದು ಎಲ್ಲರ ಧರ್ಮ ಎಂಬುವುದಾಗಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಮಧುಕೇಶ್ವರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್, ಯುವಜನಸೇವಾ ಕ್ರೀಡಾಧಿಕಾರಿ ಕುಸುಮಕರ ಶೆಟ್ಟಿ, ಸಿ.ಡಿ.ಪಿ.ಯು ನಿರಂಜನ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲಿಸ್ ಮೊದಲಾದವರು ಉಪಸ್ಥಿತರಿದ್ದರು.