ಮಂಗಳೂರು, ಫೆ 17 (DaijiworldNews/MS): ನಗರದ ಸ್ಟೇಟ್ಬ್ಯಾಂಕ್ ಸಮೀಪದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಹೆತ್ತವರು ಬಿಟ್ಟು ಹೋಗಿರುವ ನವಜಾತ ಶಿಶುವೊಂದು ಗುರುವಾರ ಪತ್ತೆಯಾಗಿದ್ದು, ವೆನ್ಲಾಕ್ನ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆತ್ತವರು ಬಿಟ್ಟು ಹೋಗಿರುವ ಮಗುವಿನ ಆರೋಗ್ಯದಲ್ಲಿ ಏರುಪೇರು ಇದ್ದು, ತಲೆಯಲ್ಲಿ ಸಣ್ಣ ಪುಟ್ಟ ಗಾಯಗಳಿವೆ. ಪತ್ತೆಯಾದ ವೇಳೆ ಮೂಗಿಗೆ ಟ್ಯೂಬ್ ಹಾಕಿದ ಸ್ಥಿತಿಯಲ್ಲಿತ್ತು. ಫಿಟ್ಸ್ ಕೂಡಾ ಇರುವುದು ತಿಳಿದು ಬಂದಿದೆ. ಗಂಡು ಮಗುವಾಗಿದ್ದು, ಜನಿಸಿ ಸುಮಾರು ಒಂದು ವಾರ ಆಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಲೈಟ್ ಕಂಬವೊಂದರ ಬುಡದಲ್ಲಿದ್ದ ಮಗು ಮಾತ್ರ ಇರುವುದನ್ನು ನೋಡಿದ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಮಗು ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ಲೇಡಿಗೋಷನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ತಪಾಸಣೆ ನಡೆಸಿ ವೆನ್ಲಾಕ್ ಗೆ ದಾಖಲಿಸಲಾಗಿದೆ. ಮಗುವಿನ ಆರೋಗ್ಯ ಸ್ಥಿರವಾಗಿರದ ಕಾರಣ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯಾಹ್ನದ ವೇಳೆ ಸರ್ವಿಸ್ ಬಸ್ ನಿಲ್ದಾಣದಲ್ಲಿ ಒಬ್ಬ ಗಂಡಸು ಹಾಗೂ ಹೆಂಗಸಿನೊಂದಿಗೆ ಈ ಮಗುವನ್ನು ಸ್ಥಳೀಯರು ನೋಡಿದ್ದು ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎನ್ನುವ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.