ಬ್ರಹ್ಮಾವರ, ಫೆ 16 (DaijiworldNews/SM): ನಾಗಸ್ವರ ವಾದನ ಹಾಗೂ ಸಾಕ್ಸೋಫೋನ್ ವಾದನದಲ್ಲಿ ಪ್ರತಿಭಾವಂತ ಕಲಾವಿದರಾಗಿದ್ದ ಸಹೋದರರಾದ ಗಣೇಶ್ ದೇವಾಡಿಗ (52) ಹಾಗೂ ರಾಘವೇಂದ್ರ ದೇವಾಡಿಗ (42) ಒಂದೇ ದಿನದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಮೃತಪಟ್ಟ ಹೃದಯ ಕಲಕುವ ಘಟನೆಯೊಂದು ಗುರುವಾರ ಬ್ರಹ್ಮಾವರದಿಂದ ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಸಹೋದರರು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಾಘವೇಂದ್ರ ದೇವಾಡಿಗ ಗುರುವಾರ ಬೆಳಗ್ಗೆ ಮೃತಪಟ್ಟರೆ, ಸುದ್ದಿ ತಿಳಿದು ಕೆಲವೇ ಗಂಟೆಗಳ ಬಳಿಕ ಅಣ್ಣ ಗಣೇಶ ದೇವಾಡಿಗ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಇಬ್ಬರೂ ಬ್ರಹ್ಮಾವರ ದೇವಾಡಿಗರಬೆಟ್ಟು ರಘುನಾಥ ದೇವಾಡಿಗ ಹಾಗೂ ಸುಮತಿ ದೇವಾಡಿಗ ಇವರ ಪುತ್ರರು. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಕೂಡ ವಾದ್ಯ ಸಂಗೀತದಲ್ಲಿ ಪ್ರಸಿದ್ಧಿ ಪಡೆದವರಾಗಿದ್ದು, ಒಂದೇ ದಿನ ಸಂಗೀತದ ಸ್ವರ ನಿಲ್ಲಿಸಿದ ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ ಮರುಕ ಪಡುತ್ತಿದೆ.
ಗಣೇಶ್ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದರೆ, ರಾಘವೇಂದ್ರ ಪತ್ನಿಯನ್ನು ಅಗಲಿದ್ದಾರೆ. ಮನೆಯ ಮಕ್ಕಳಿಬ್ಬರನ್ನು ಒಂದೇ ದಿನ ಕಳೆದು ಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನೂರಾರು ಮಂದಿ ಅಭಿಮಾನಿಗಳು ಕಲಾವಿದ ಸಹೋದರರ ಅಗಲುವಿಕೆಗೆ ಕಂಬನಿ ಮಿಡಿಯುತಿದ್ದಾರೆ.