ಬಂಟ್ವಾಳ: ಫೆ 16 (DaijiworldNews/SM): ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಪೋಲೀಸರ ತಂಡ ಸೊತ್ತುಗಳ ಸಹಿತ ಇಬ್ಬರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತುಂಬೆ ನಿವಾಸಿಗಳಾದ ಮೊಹಮ್ಮದ್ ಆನ್ಸಾಫ್, ನವಾಜ್ ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 1.90 ಲಕ್ಷ ಮೌಲ್ಯದ ಸೊತ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ತಾಲೂಕಿನ ಬಾಳ್ತಿಲ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಉಪಯೋಗಿಸಿ ದ ಫಾರೂಕ್ ಎಂಬವರಿಗೆ ಸೇರಿದ 97,900 ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಕಳವು ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದ ಬೆನ್ನ ಹತ್ತಿ ಹೋಗಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಈ ಕಳವು ಪ್ರಕರಣದ ಜೊತೆಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳವು ಮಾಡಿದ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ 21 ಗೋಣಿ ಚೀಲಗಳಲ್ಲಿ 90,000 ಮೌಲ್ಯದ 401 ಕೆ.ಜಿ.ಅಡಿಕೆಯನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಎಸ್.ಪಿ.ವಿಕ್ರಮ್ ಅಮ್ಟೆ ಅವರ ಮಾರ್ಗದರ್ಶನದಂತೆ, ಬಂಟ್ವಾಳ ಡಿ.ವೈ.ಎಸ್.ಪಿ.ನಿರ್ದೇಶನದಂತೆ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತ್ರತ್ವದಲ್ಲಿ ಪೋಲೀಸ್ ಸಿಬ್ಬಂದಿ ಗಳಾದ ಎ.ಎಸ್.ಐ.ನಾರಾಯಣ, , ಜಿನ್ನಪ್ಪ ಗೌಡ, ಇರ್ಷಾದ್ ಪಿ.ರಾಜೇಶ್ , ಗಣೇಶ್, ಮನೋಹರ, ಪ್ರವೀಣ್, ಮೋಹನ್ ಕಾರ್ಯಚರಣೆ ಯಲ್ಲಿ ಭಾಗವಹಿಸಿದ್ದರು.